ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅದ್ಧೂರಿ ಚಾಲನೆ ದೊರೆತಿದೆ. ಫ್ರಾನ್ಸ್ ರಾಜಧಾನಿ ಸೀನ್ ನದಿಯ ತಟದಲ್ಲಿ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ವಿಶೇಷ ಎಂದರೆ ಈ ಬಾರಿ ಪರೇಡ್ ಆಫ್ ನೇಷನ್ಸ್ ಅನ್ನು ನದಿಯಲ್ಲಿ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಸ್ಟೇಡಿಯಂ ಒಳಗೆ ನಡೆಯುವ ಕ್ರೀಡಾಪಟುಗಳ ಮೆರವಣಿಗೆ ಈ ಸಲ ಬೋಟ್ಗಳಲ್ಲಿ ಆಯೋಜಿಸಿ ಪ್ರೇಕ್ಷರನ್ನು ಭವ್ಯತೆ ಮತ್ತು ಸಾಂಕೇತಿಕವಾಗಿ ಆಕರ್ಷಿಸಿತು.
ಈ ಪರೇಡ್ನಲ್ಲಿ ಭಾರತವನ್ನು ಪಿವಿ ಸಿಂಧು ಹಾಗೂ ಶರತ್ ಕಮಲ್ ಮುನ್ನಡೆಸಿದ್ದರು. ಭಾರತೀಯ ಕ್ರೀಡಾಪಟುಗಳು ದೇಶಿ ಉಡುಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಆಸ್ಟರ್ಲಿಟ್ಜ್ ಸೇತುವೆಯ ಭಾಗದಿಂದ ಶುರುವಾದ ಪರೇಡ್ ಆಫ್ ನೇಷನ್ಸ್ ಮೆರವಣಿಯಲ್ಲಿ 85 ದೋಣಿಗಳು 6,800 ಕ್ಕೂ ಹೆಚ್ಚು ಕ್ರೀಡಾಪಟುಗಳು ಕಾಣಿಸಿಕೊಂಡಿದ್ದರು. ಪ್ರತಿ ದೇಶಗಳ ಕ್ರೀಡಾಪಟುಗಳ ಆಗಮನದ ವೇಳೆ ನೆರೆದಿದ್ದ ಪ್ರೇಕ್ಷಕರಿಂದ ಹರ್ಷೋದ್ಗಾರ ಮೊಳಗಿತು. ಆದಾಗ್ಯೂ, ಶನಿವಾರದಂದು ಪಂದ್ಯಗಳಿರುವ ಅನೇಕ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಿಂದ ಹೊರಗುಳಿದಿದ್ದರು.
ಇನ್ನು ಈ ಉದ್ಘಾಟನಾ ಸಮಾರಂಭದಲ್ಲಿ ಫ್ರೆಂಚ್ ಫುಟ್ಬಾಲ್ ತಾರೆ ಝಿನೆಡಿನ್ ಝಿದಾನೆ, ಟೆನಿಸ್ ಆಟಗಾರ ರಾಫೆಲ್ ನಡಾಲ್ ಒಲಿಂಪಿಕ್ಸ್ ಜ್ಯೋತಿಯೊಂದಿಗೆ ಕಾಣಿಸಿಕೊಂಡಿದ್ದರು. ಇವರ ಜೊತೆಗೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಪಾಪ್ ತಾರೆಯರಾದ ಲೇಡಿ ಗಾಗಾ ಮತ್ತು ಅಯಾ ನಕಮುರಾ, IOC ಅಧ್ಯಕ್ಷ ಥಾಮಸ್ ಬಾಚ್ ಮತ್ತು ಪ್ಯಾರಿಸ್ 2024 ಮುಖ್ಯಸ್ಥ ಟೋನಿ ಎಸ್ಟಾಂಗ್ಯುಟ್ ಉಪಸ್ಥಿತರಿದ್ದರು.
ಒಲಿಂಪಿಕ್ಸ್- ಪದಕಗಳ ಬೇಟೆಯಾಡಲಿ ಭಾರತ!:
33ನೇ ಆವೃತ್ತಿಯ ಒಲಿಂಪಿಕ್ಸ್ಗೆ ಅಧಿಕೃತ ಚಾಲನೆ ದೊರೆತಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಭಾರತದ 117 ಸ್ಪರ್ಧಿಗಳು ಕಣದಲ್ಲಿದ್ದಾರೆ. ಅದರಲ್ಲೂ ಜುಲೈ 27 ರಂದು ನಡೆಯುವ 11 ಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಗಳು ಕಣಕ್ಕಿಳಿಯಲಿರುವುದು ವಿಶೇಷ.
ಶನಿವಾರ ಮಧ್ಯಾಹ್ನದಿಂದ ಪಂದ್ಯಗಳು ಶುರುವಾಗಲಿದ್ದು, ಭಾರತವು ಏರ್ ರೈಫಲ್ ಮೂಲಕ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಬ್ಯಾಡ್ಮಿಂಟನ್, ರೋಯಿಂಗ್, ಶೂಟಿಂಗ್, ಟೆನಿಸ್, ಟೇಬಲ್ ಟೆನ್ನಿಸ್, ಬಾಕ್ಸಿಂಗ್ ಮತ್ತು ಹಾಕಿ ಪಂದ್ಯಗಳು ನಡೆಯಲಿದೆ. ಹಾಕಿ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದ್ದು, ಶುಭಾರಂಭ ಮಾಡಲು ಕಾತುರದಿಂದ ಇದೆ.