ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು 9ನೇ ವಾರಕ್ಕೆ ಹಾವು-ಮುಂಗುಸಿಗಳಾಗಿದ್ದಾರೆ. ಎಲ್ಲರೂ ಇಷ್ಟು ದಿನ ಒಂದು ಆಟ ಇನ್ಮುಂದೆ ನಡೆಯೋದೇ ಬೇರೆ ಆಟ ಅನ್ನೋ ಶಪಥ ಮಾಡಿದ್ದಾರೆ. ಈ ವಾರದ ಎಲಿಮಿನೇಷನ್‌ಗೆ ಇನ್ನು ಉಳಿದಿರೋದು 2 ದಿನ ಮಾತ್ರ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಸೃಷ್ಟಿಯಾದ ಮಂಜಣ್ಣನ ಸಾಮ್ರಾಜ್ಯದಲ್ಲಿ ರಣರಂಗವೇ ಸೃಷ್ಟಿಯಾಗಿತ್ತು. ಈ ರೋಚಕ ಹೋರಾಟದಲ್ಲಿ ಕೊನೆಗೆ ಶೋಭಾ ಶೆಟ್ಟಿ, ಗೋಲ್ಡ್ ಸುರೇಶ, ಶಿಶಿರ್, ಭವ್ಯಾ, ಚೈತ್ರಾ, ತ್ರಿವಿಕ್ರಮ್ ಹಾಗೂ ಐಶ್ವರ್ಯಾ ನಾಮಿನೇಟ್ ಆಗಿದ್ದಾರೆ.
ಇದೇ ವೇಳೆ ಮುಂದಿನ ವಾರಕ್ಕೆ ಯಾರು ಕ್ಯಾಪ್ಟನ್ ಆಗಬೇಕು ಅನ್ನೋ ಜಿದ್ದಾಜಿದ್ದಿ ಶುರುವಾಗಿದೆ. ಬಿಗ್ ಬಾಸ್ ಮಹಾರಾಜ ಮಂಜಣ್ಣ, ಯುವರಾಣಿ ಮೋಕ್ಷಿತಾ ಅವರಿಗೆ ವಿಶೇಷ ಅಧಿಕಾರವನ್ನ ನೀಡಿದ್ದಾರೆ. ಒಬ್ಬ ಪ್ರಜೆಯನ್ನು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಬೇಕು ಎಂದಾಗ ಮಂಜಣ್ಣ ಹಾಗೂ ಮೋಕ್ಷಿತಾ ಅವರ ನಿರ್ಧಾರ ಇಡೀ ಮನೆಯ ವಾತಾವರಣ ಬದಲಾಗುವಂತೆ ಮಾಡಿದೆ.
ಯುವರಾಣಿ ಪಟ್ಟದಲ್ಲಿರುವ ಮೋಕ್ಷಿತಾ ಅವರು ಈ ವಾರದ ಕ್ಯಾಪ್ಟನ್ಸಿ ಓಟದಿಂದ ತ್ರಿವಿಕ್ರಮ್ ಅವರನ್ನ ಹೊರ ಹಾಕಿದ್ದಾರೆ. ಇಲ್ಲಿಂದ ಅಲ್ಲಿ ಅಲ್ಲಿಂದ ಇಲ್ಲಿಗೆ ಹೇಳುವಂತಹ ಬುದ್ಧಿ ತ್ರಿವಿಕ್ರಮ್ ಅವರಿಗೆ ಅನ್ನೋ ಕಾರಣ ನೀಡಿದ್ದಾರೆ. ಮೋಕ್ಷಿತಾ ಅವರ ಮಾತಿಗೆ ಥೂ.. ಇಂತಹ ಗೋಸುಂಬೆ ಆಟ ಆಡೋದಿದ್ರೆ ನಾವು ಇನ್ನೊಂದು ಆಟ ಆಡುತ್ತಾ ಇದ್ದೆವು ಎಂದು ತ್ರಿವಿಕ್ರಮ್ ಅವರು ಖಡಕ್ ಸವಾಲು ಹಾಕಿದ್ದಾರೆ.
ಮಹಾರಾಜ ಮಂಜಣ್ಣ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸಖತ್ ಸ್ಟ್ರ್ಯಾಟಜಿ ಮಾಡಿದ್ದಾರೆ. ರಜತ್ ಅವರನ್ನ ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಿದ್ದಾರೆ. ರಜತ್ ಅವರಿಗೆ ಸರಿ ಸಮಾನವಾಗಿ ಆಟ ಆಡುವವರು ಯಾರು ಇಲ್ಲ. ನಾವೆಲ್ಲರೂ ಚಿಕ್ಕವರೇ ಎಂದು ಕಾಣುವಂತಹ ಮನೋಭಾವನೆ ಅವರಲ್ಲಿದೆ. ಹೀಗಾಗಿ ಕ್ಯಾಪ್ಟನ್ಸಿ ಓಟದಿಂದ ರಜತ್ ಅವರನ್ನು ಹೊರಹಾಕುತ್ತೇನೆ ಎಂದಿದ್ದಾರೆ.
ಮಂಜಣ್ಣನ ಸಡನ್ ಟ್ವಿಸ್ಟ್‌ನಿಂದ ರಜತ್ ಅವರು ಕೆರಳಿ ಕೆಂಡವಾಗಿದ್ದಾರೆ. ಇವನು ಆಗ್ಲೇ ಫಿಕ್ಸ್ ಆಗಿದ್ದಾನೆ ವಿನ್ನರ್ ಅಂತ. ರನ್ನರ್ ಅನ್ನು ಫಿಕ್ಸ್ ಮಾಡಿಬಿಟ್ಟಿದ್ದಾನೆ. ಕ್ಯಾಪ್ಟನ್ ಮನೆಯಿಂದ ಆಚೆ ಬರೋಕೆ ಮುಖ ಎಲ್ಲಿದೆ. ಅಲ್ಲೇ ಕೂತಿರುತ್ತಾನೆ ಬ್ರೆಕ್ ಶೀಟ್ ಹಾಕಿಕೊಂಡು. ರೋಗಿಷ್ಟ ರಾಜ ಎಂದು ಮಂಜಣ್ಣ ಮೇಲೆ ಕಿಡಿಕಾರಿದ್ದಾರೆ.