ಬೆಂಗಳೂರು: “ರಾಜ್ಯ ಸರ್ಕಾರದ ಗುತ್ತಿಗೆ ಮತ್ತು ಟೆಂಡರ್ಗಳಲ್ಲಿ ಮಧ್ಯಸ್ಥಿಕೆ ಕಲಂ (ಆರ್ಬಿಟ್ರೇಷನ್) ರದ್ದುಗೊಳಿಸಲು ನಿರ್ಧರಿಸಲಾಗಿದೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಮಧ್ಯಸ್ಥಿಕೆ ಕಲಂ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟು ಮಾಡುತ್ತಿದ್ದು, ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಮಧ್ಯಸ್ಥಿಕೆ ಕಲಂನಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುವುದಾಗಿ ಕಾನೂನು ಇಲಾಖೆಯ ಗಮನಕ್ಕೆ ಬಂದಿದೆ. ಹಾಗಾಗಿ, ಕಲಂ ಕೈಬಿಡಲು ತೀರ್ಮಾನಿಸಲಾಗಿದೆ. ಆರ್ಬಿಟ್ರೇಷನ್ ರದ್ದು ಮಾಡುವ ಬಗ್ಗೆ ನ.16ರಂದು ಸುತ್ತೋಲೆ ಹೊರಡಿಸಲಾಗಿದೆ” ಎಂದರು.
“ಇಲ್ಲಿಯವರೆಗೂ ಗುತ್ತಿಗೆ ಮತ್ತು ಟೆಂಡರ್ಗಳಲ್ಲಿ ಮಧ್ಯಸ್ಥಿಕೆ ಕಲಂ ಕಡ್ಡಾಯವಾಗಿತ್ತು. ಈ ಕಲಂ ರದ್ದು ರದ್ದುಪಡಿಸುವುದರಿಂದ ಗುತ್ತಿಗೆದಾರರು ಮತ್ತು ಟೆಂಡರ್ ಪಡೆದವರು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹಲವು ಪ್ರಕರಣಗಳಲ್ಲಿ ಈ ಕಲಂ ಬಳಸಿಕೊಂಡು ನ್ಯಾಯಾಲಯಗಳ ಮೆಟ್ಟಿಲೇರಿದ ಕಾರಣ ಸರ್ಕಾರ ಆರ್ಥಿಕ ನಷ್ಟ ಅನುಭವಿಸಿತ್ತು” ಎಂದು ಹೇಳಿದರು.
“ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಪಾಲನೆ ಮಾಡದ ಕಾರಣ 1,006 ಮಾನನಷ್ಟ ಮೊಕದ್ದಮೆಗಳು ದಾಖಲಾಗಿದೆ. ಇವುಗಳನ್ನು 2025ರ ಮಾ.31ರೊಳಗೆ ನಾಲ್ಕು ಅಂಕಿಯಿಂದ ಎರಡಂಕಿಗೆ ಕಡಿತಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
ರಾಜ್ಯದ ವಿವಿಧ ಇಲಾಖೆಗಳು ನ್ಯಾಯಾಲಯ ನೀಡಿರುವ ಆದೇಶಗಳು, ಸೂಚನೆಗಳನ್ನು ಪಾಲನೆ ಮಾಡದ ಕಾರಣ 1,006 ನ್ಯಾಯಾಂಗ ನಿಂದನೆ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯ ನೀಡಿದ ಆದೇಶಗಳಿಗೆ ಅಗೌರವ, ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳ ವರ್ತನೆಯಿಂದ ನ್ಯಾಯಾಂಗ ನಿಂದನೆ ಎದುರಿಸಬೇಕಾಗಿದೆ.
ನಾಲ್ಕು ಅಂಕಿಯಷ್ಟು ಪ್ರಕರಣ ದಾಖಲಾಗಿದ್ದು, ಅವುಗಳನ್ನು ಮುಂದಿನ ವರ್ಷದ ಮಾ.31ರೊಳಗೆ ಎರಡಂಕಿಗೆ ತರಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
“ನ್ಯಾಯಾಲಯದ ಆದೇಶಗಳಿಗೆ ಸರ್ಕಾರ ಯಾವಾಗಲೂ ಸ್ಪಂದನಶೀಲವಾಗಿರಬೇಕು. ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಾದರೆ ಅವುಗಳನ್ನು ಒದಗಿಸಬೇಕು. ಅನುಷ್ಠಾನಗೊಳಿಸುವುದಾದರೆ ಅವುಗಳನ್ನು ಕಾರ್ಯರೂಪಕ್ಕೆ ತರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂಬುದಾಗಿ ಸೂಚಿಸಲಾಗಿದೆ. ನ್ಯಾಯಾಲಯದ ಆದೇಶಗಳಿಗೆ ಗೌರವ ನೀಡುವುದು ಸರ್ಕಾರದ ಕರ್ತವ್ಯ. ಅಲ್ಲದೇ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಹ ಜವಾಬ್ದಾರಿಯಾಗಿರುತ್ತದೆ” ಎಂದರು.
“ಗದಗ ಜಿಲ್ಲೆಯ ಲಕ್ಕುಂಡಿ ತಾಣವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಇದೇ 24ರಂದು ಗ್ರಾಮದ ಪ್ರತಿ ಮನೆಗೆ ತೆರಳಿ ಪ್ರಾಚ್ಯ ವಸ್ತುಗಳ ಸಂಗ್ರಹಣೆ ಮಾಡಲಾಗುವುದು. ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಹಲವರ ಬಳಿ ಪ್ರಾಚ್ಯ ವಸ್ತುಗಳ ಸಂಗ್ರಹ ಇರುತ್ತವೆ. ಅವುಗಳನ್ನು ಪಡೆದು ಸಂಗ್ರಹಾಲಯದಲ್ಲಿ ಇಡುವ ಕಾರ್ಯ ಮಾಡಲಾಗುವುದು” ಎಂದು ಹೇಳಿದರು.
ಗ್ರಾಮದ ಹಲವರ ಬಳಿ ವಿಶೇಷ ನಾಣ್ಯಗಳು, ಶಿಲ್ಪಕಲೆಗಳು, ಮೂರ್ತಿಗಳು ಸೇರಿದಂತೆ ಪ್ರಾಚ್ಯ ವಸ್ತುಗಳು ಇರುತ್ತವೆ. ಅವುಗಳನ್ನು ಸಂಗ್ರಹಿಸಿ ಒಂದೆಡೆ ಇಡುವ ಕೆಲಸ ಮಾಡಲಾಗುವುದು. ಈ ನಿಟ್ಟಿನಲ್ಲಿ ಇದೇ 24ರಂದು ಲಕ್ಕುಂಡಿ ಗ್ರಾಮದಲ್ಲಿ ಗ್ರಾಮಸ್ಥರ ಮನೆಗಳಿಗೆ ಭೇಟಿ ನಿಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಲವರು ವಿಶಿಷ್ಟ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಿಹಾಕುವ ನಿದರ್ಶನಗಳಿವೆ. ಅಂತಹವುಗಳನ್ನು ಪಡೆದುಕೊಳ್ಳಲಾಗುವುದು. ಅಲ್ಲದೇ, ಕೆಲವರು ವಾಸಸ್ಥಳವು ಸಹ ಪಾರಂಪರಿಕ ಸ್ಥಳವಾಗಿರುತ್ತದೆ. ಅಂತಹವರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಲಕ್ಕುಂಡಿ ತಾಣವನ್ನು ಅಭಿವೃದ್ಧಿಗೊಳಿಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.