ಬೆಂಗಳೂರು : ಓದುವ ಬೆಳಕು ಕಾರ್ಯಕ್ರಮದಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಲ್ಲಿ ನವೆಂಬರ್ 14ರಂದು ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ, ಗ್ರಾಮೀಣ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿರುವ ಓದುವ ಕಾರ್ಯಕ್ರಮದಡಿ ನವೆಂಬರ್ 14ರಂದು ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅದೇ ರೀತಿ ನ.20 ರಂದು ಅಂತರ್ರಾಷ್ಟ್ರೀಯ ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮಗಳನ್ನು ಆಚರಿಸಲಾಗುವುದು ಎಂದು ಪ್ರಕಟಣೆ ನೀಡಿದ್ದಾರೆ.
ಮಕ್ಕಳ ಸೃಜನಶೀಲತೆ ಮತ್ತು ಗ್ರಹಿಸುವಿಕೆ ಸಾಮಥ್ರ್ಯವನ್ನು ವೃದ್ಧಿಸಲು ಈ ತಿಂಗಳು ಕಡಲತೀರದ ದೃಶ್ಯ, ಮಾರುಕಟ್ಟೆ, ಜಾತ್ರೆ, ಆಟದ ಮೈದಾನ ಮತ್ತು ಮಕ್ಕಳು ಆನಂದಿಸುವ ಇತರ ಸ್ಥಳಗಳಂತಹ ವರ್ಣರಂಜಿತ ಚಿತ್ರಗಳನ್ನು ಮುದ್ರಿಸಿ ಮಕ್ಕಳಿಗೆ ವಿವರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳು ಇಂತಹ ಚಿತ್ರಗಳ ಬಗ್ಗೆ ತಮ್ಮ ಸ್ನೇಹಿತರಿಗೆ ವಿವರಿಸಲು ಅಥವಾ ಚರ್ಚೆ ನಡೆಸಲು ಹಾಗೂ ಈ ವಸ್ತುವನ್ನು ಇರಿಸಿಕೊಂಡು ಕಥೆಯನ್ನು ರಚಿಸಲು ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ತಮ್ಮ ಜೀವನದಲ್ಲಿ ಸ್ಫೂರ್ತಿ ತುಂಬಿದ ವಿವಿಧ ಶಿಕ್ಷಕರ ಕುರಿತು ಪ್ರಬಂಧ ಬರೆಯುವುದು ಸೇರಿದಂತೆ ಸೆ.5ರಂದು ಶಿಕ್ಷಕರ ದಿನದ ಅಂಗವಾಗಿ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ,
ಸೆಪ್ಟೆಂಬರ್ 8ರಂದು ಅಂತರ ರಾಷ್ಟ್ರೀಯ ಅಜ್ಜಿ-ತಾತಂದಿರ ದಿನವಾಗಿದ್ದು ಅಂದು ಊರಿನ ಹಿರಿಯರನ್ನು ಅರಿವು ಕೇಂದ್ರಗಳಿಗೆ ಆಹ್ವಾನಿಸಿ ಅವರಿಂದ ಕಥೆ ಹೇಳಿಸುವುದು ಅಥವಾ ಅನುಭವ ಹಂಚಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು,
ಸೆಪ್ಟೆಂಬರ್ 8ರಂದು ಅಂತರ ರಾಷ್ಟ್ರೀಯ ಸಾಕ್ಷರತಾ ದಿನದ ಸಲುವಾಗಿ ‘ಗಟ್ಟಿ ಓದುʼ ಚಟುವಟಿಕೆ ಮೂಲಕ ಪ್ರತಿದಿನವೂ ಒಂದು ಕಥೆಯನ್ನು ಮಕ್ಕಳಿಂದ ಓದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸೆ. 15ರಂದು ಅಂತಾರಾಷ್ಟೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಂದ ಭಾರತ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚನ ಮಾಡಿಸಲಾಗುವುದು, ಸೆ. 15ರಂದು ರಾಷ್ಟ್ರೀಯ ಇಂಜಿನಿಯರ್‌ಗಳ ದಿನದಂದು ಸರ್ ಎಂ.ವಿಶ್ವೇಶ್ವರಯ್ಯ ವಿವಿಧ ವಲಯಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.