ಬೆಂಗಳೂರು : ಭ್ರಷ್ಟಾಚಾರ, ಕಿರುಕುಳದ ಆರೋಪ ತೀವ್ರತೆ ಪಡೆದುಕೊಳ್ಳುತ್ತಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆಗೆ ಮುಂದಾಗಿದ್ದು, ನವೆಂಬರ್ 20ರಂದು ಮದ್ಯದಂಗಡಿ ಬಂದ್ ಗೆ ಕರೆ ನೀಡಿದ್ದಾರೆ.
ಈ ಹಿನ್ನೆಲೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮದ್ಯ ಮಾರಾಟಗಾರರ ಜೊತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿಸಿ ಜಾಫರ್ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮದ್ಯ ಮಾರಾಟಗಾರರ ಅಧ್ಯಕ್ಷ ಗುರುಸ್ವಾಮಿ ಮಾತನಾಡಿದ್ದಾರೆ. ಸಿಎಂ ಜೊತೆ ಕೂಡ ಸಭೆ ಮಾಡುತ್ತೇವೆ, ನವೆಂಬರ್ 20 ರಂದು ಮದ್ಯ ಮಾರಾಟ ಬಂದ್ ಆಗಲಿದೆ . ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಮದ್ಯದಂಗಡಿ ಮಾಲೀಕರು ತಿರುಗಿ ಬಿದ್ದಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆ, ಪ್ರಮೋಷನ್ ಗಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಇಲಾಖೆ ಸಚಿವರ ಬದಲಿಸಬೇಕು. ಹಾಗೂ ಭ್ರಷ್ಟಾಚಾರ ತಡೆಗಟ್ಟುವತೆ ಆಗ್ರಹಸಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಗೆ ಕರೆ ನೀಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಸಚಿವರನ್ನು ಬದಲಿಸುವಂತೆ ಒತ್ತಾಯಿಸಿ ಮದ್ಯದಂಗಡಿ ಮಾಲೀಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಸಿಎಲ್ -7 ಪರವಾನಗಿ ನೀಡಿಕೆಗೆ ಲಂಚ ವಸೂಲಿ, ಮದ್ಯ ಮಾರಾಟಗಾರರಿಂದ ಮಾಸಿಕ ನಿಗದಿತ ಮೊತ್ತಕ್ಕಾಗಿ ಕಿರುಕುಳದ ಜತೆಗೆ, ಉಪ ಅಬಕಾರಿ ಆಯುಕ್ತರು, ಅಬಕಾರಿ ಅಧೀಕ್ಷಕರಿಗೆ ಬೆಂಗಳೂರು ನಗರ ಸುತ್ತಮುತ್ತ ಪೋಸ್ಟಿಂಗ್‌ಗೆ ಅಬಕಾರಿ ಸಚಿವರ ಕಚೇರಿಯಿಂದ ಒಂದೇ ದಿನ 16 ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ಮದ್ಯ ಮಾರಾಟಗಾರರು ಆರೋಪಿಸಿದ್ದರು.
ಈ ಸಂಬಂಧ ರಾಜ್ಯಪಾಲರು, ಲೋಕಾಯುಕ್ತರು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಇ -ಮೇಲ್ ಮೂಲಕ ದೂರು ನೀಡಲಾಗಿತ್ತು. ಇದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಸಂಘದ ಪದಾಧಿಕಾರಿಗಳನ್ನು ಹಣಕಾಸು ಅಧಿಕಾರಿಗಳು ಸಭೆ ನಡೆಸಿ ಸುದೀರ್ಘವಾಗಿ ಅಹವಾಲು ಆಲಿಸಿದರು.