ಚಿತ್ರದುರ್ಗ : ಚಿತ್ರದುರ್ಗದ ಬಿಇಒ ಕಚೇರಿ ಪಕ್ಕದಲ್ಲಿಯೇ ಇರುವ ಸರಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರ ಶಾಲೆಯ ಶೋಚನೀಯ ಸ್ಥಿತಿ ಇದು. ಇಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗದಂತೆ ತಡೆಯಲು ಶಿಕ್ಷಕರೇ ತಮ್ಮ ಸಂಬಳದಿಂದ ಅವರ ಆಟೋ ಖರ್ಚು ಭರಿಸುತ್ತಿದ್ದಾರೆ. ಇತ್ತ ಶಾಲೆಯ ಕೊಠಡಿಗಳು ಯಾವಾಗ ಬೀಳುವುದೋ ಎಂಬ ಭೀತಿಯೂ ಅವರನ್ನು ಕಾಡುತ್ತಿದೆ.
ಮಕ್ಕಳ ದಾಖಲಾತಿ ಕುಸಿಯದಿರಲು ಶಿಕ್ಷಕರೇ ಮಕ್ಕಳ ಸಾರಿಗೆ ವೆಚ್ಚ ಭರಿಸಿ ಮಕ್ಕಳನ್ನು ಶಾಲೆಗೆ ಕರೆತರುವ ವ್ಯವಸ್ಥೆ ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ನಗರದ ಕೆಲ ಉರ್ದು ಶಾಲೆಗಳಲ್ಲಿದೆ.ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿನ ಬಿಇಒ ಕಚೇರಿ ಪಕ್ಕದಲ್ಲಿರುವ ಸರಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸುಮಾರು 128 ಮಕ್ಕಳಿದ್ದಾರೆ.
ಈ ಶಾಲೆಗೆ ದೂರದ ಮಾಳಪ್ಪನಹಟ್ಟಿ, ಆಶ್ರಯ ಬಡಾವಣೆ, ಚೇಳುಗುಡ್ಡ, ಮಂಡಕ್ಕಿಭಟ್ಟಿ, ಆಜಾದ್ ನಗರ ಸೇರಿದಂತೆ ಮತ್ತಿತರೆ ಕಡೆಗಳಿಂದ ಮಕ್ಕಳು ಈ ಶಾಲೆಗೆ ಬಂದು ಹೋಗಲು ಆಟೋ ರಿಕ್ಷಾಗೆ ಬಾಡಿಗೆಗಾಗಿ ಶಿಕ್ಷಕರೇ ತಮ್ಮ ಸ್ವಂತ ಹಣದಲ್ಲಿ ಭರಿಸುತ್ತಿರುವುದು ವಿಶೇಷ. ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾದರೆ ಅನುಪಾತದಡಿ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡುವ ಆತಂಕ ಇದಕ್ಕೆ ಕಾರಣ.
ಈ ಶಾಲೆಯು ನಗರದ ಮಧ್ಯಭಾಗದಲ್ಲಿದ್ದು, ಸುತ್ತಮುತ್ತ ಪ್ರದೇಶಗಳಲ್ಲಿ ಸಾಕಷ್ಟು ಉರ್ದು ಭಾಷಿಕರ ಮನೆಗಳಿಲ್ಲದ ಕಾರಣ ಈ ರೀತಿಯ ವ್ಯವಸ್ಥೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ.
ಶಾಲಾ ದಾಖಲಾತಿ ಸಂದರ್ಭದಲ್ಲಿ ಇಲ್ಲಿನ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉರ್ದು ಶಾಲೆಗಳಿಲ್ಲದ ಪ್ರದೇಶಗಳಿಗೆ ತೆರಳಿ ಪೋಷಕರ ಮನವೊಲಿಸಿ ಮಕ್ಕಳನ್ನು ಕರೆತರುತ್ತಾರೆ.
ಮಕ್ಕಳು ಶಾಲೆಗೆ ಬಂದು ಹೋಗುವ ಆಟೋ ರಿಕ್ಷಾ ವ್ಯವಸ್ಥೆಯನ್ನು ಶಿಕ್ಷಕರೇ ಮಾಡುತ್ತಾರೆ. ಪ್ರತಿದಿನ ಮೂರು ಟ್ರಿಪ್‌ಗಳಲ್ಲಿ ಮಕ್ಕಳನ್ನು ಕರೆದುಕೊಂಡು, ಸಂಜೆ ಮೂರು ಟ್ರಿಪ್‌ಗಳಲ್ಲಿ ಬಿಟ್ಟುಬರುವ ವ್ಯವಸ್ಥೆ ಇದೆ.
ಈ ಶಾಲೆಯಲ್ಲಿ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿ ಒಟ್ಟು ಎಂಟು ಮಂದಿ ಶಿಕ್ಷಕರಿದ್ದಾರೆ. ಮುಖ್ಯಶಿಕ್ಷಕರು ತಿಂಗಳಿಗೆ ನಾಲ್ಕೈದು ಸಾವಿರ, ಉಳಿದ ಶಿಕ್ಷಕರು ತಲಾ ಒಂದು ಸಾವಿರ ಸೇರಿಸಿ ಒಟ್ಟು 12 ಸಾವಿರ ಆಟೋ ರಿಕ್ಷಾ ಬಾಡಿಗೆ ಭರಿಸುತ್ತಿದ್ದಾರೆ. ಇಂತಹದ್ದೇ ವ್ಯವಸ್ಥೆ ನಗರದ ಇತರೆ ಉರ್ದು ಶಾಲೆಗಳಲ್ಲೂ ಇದೆ.
ಸುಮಾರು 123 ವರ್ಷಗಳಷ್ಟು ಹಳೆಯದಾದ ಈ ಶಾಲೆ ಸ್ಥಿತಿ ಮೇಲೆಲ್ಲ ತಳುಕು ಒಳಗೆಲ್ಲ ಹುಳುಕು ಎಂಬಂತಿದೆ. ಹತ್ತು ಕೊಠಡಿಗಳಿದ್ದು, ಒಂದೆರೆಡು ಹೊರತುಪಡಿಸಿ ಬಹುತೇಕ ಎಲ್ಲ ಕೊಠಡಿಗಳ ಸ್ಥಿತಿ ಶೋಚನೀಯವಾಗಿದೆ. ಮಳೆ ಬಂದರೆ ಸೋರುತ್ತವೆ, ಕೊಠಡಿ ಒಳಭಾಗದ ಆರ್‌ಸಿಸಿ ಚಕ್ಕೆ ಯಾವ ಸಂದರ್ಭದಲ್ಲಾದರೂ ಬಿದ್ದು ಅನಾಹುತ ಸಂಭವಿಸಬಹುದು. ಒಂದೆರೆಡು ಬಾರಿ ರಿಪೇರಿ ಮಾಡಿಸಿ, ಸುಣ್ಣ ಬಣ್ಣ ಲೇಪಿಸಲಾಗಿದೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಖ್ಯ ಶಿಕ್ಷಕರ ಕಚೇರಿಯ ಕೊಠಡಿ ಒಳಭಾಗದ ಆರ್‌ಸಿಸಿ ಚಕ್ಕೆ ಬಿದ್ದು ಮುಖ್ಯಶಿಕ್ಷಕರು, ಸಹಶಿಕ್ಷಕರು ಗಾಯಗೊಂಡಿದ್ದರು ಎಂಬುದನ್ನು ಇಲ್ಲಿನ ಹಿರಿಯ ಶಿಕ್ಷಕರು ತಿಳಿಸುತ್ತಾರೆ.
“ಹತ್ತು ಕೊಠಡಿಗಳಲ್ಲಿ ಒಂದೆರೆಡು ಹೊರತುಪಡಿಸಿ ಬಹುತೇಕ ಕೊಠಡಿಗಳು ಮಳೆಗೆ ಸೋರುತ್ತವೆ, ಸಿಮೆಂಟ್ ನೆಲ ಕಿತ್ತುಹೋಗಿವೆ. ಸುಮಾರು 50ಕ್ಕೂ ಹೆಚ್ಚು ಡೆಸ್ಕ್‌ಗಳು ಬೇಕಿದೆ, ಪೀಠೋಪಕರಣಗಳ ಅವಶ್ಯಕತೆ ಇದೆ. ಅಟೆಂಡರ್ ಹುದ್ದೆ ಖಾಲಿಯಿದೆ, ಹೈಟೆಕ್ ಅಡುಗೆ ಮನೆ, ಬಾತ್‌ರೂಂ ಅವಶ್ಯಕತೆ ಇದೆ” ಎಂದು ಮುಖ್ಯ ಶಿಕ್ಷಕಿ ಉಮ್ಮಿ ಸುಮಯ್ಯ ಅವರು ತಿಳಿಸಿದ್ದಾರೆ.