ಬೆಂಗಳೂರು: ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೂರು ಕ್ಷೇತ್ರಗಳ ಉಪಸಮರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಆ ಮೂಲಕ ಬಿಜೆಪಿ – ಜೆಡಿಎಸ್ ಮೈತ್ರಿ ಲೆಕ್ಕಾಚಾರ ತಲೆಕೆಳಗಾಗಿದೆ.
ಮಾಜಿ ಸಿಎಂಗಳ ಅಖಾಡದಲ್ಲೇ ಅವರ ಪುತ್ರರನ್ನು ಸೋಲಿಸಿ ಕಾಂಗ್ರೆಸ್ ಗೆಲುವು ಕಂಡಿದೆ. ಗೌಡರ ಕುಟುಂಬ ಹಾಗೂ ಡಿ.ಕೆ.ಬ್ರದರ್ಸ್ ಪ್ರತಿಷ್ಠೆಯ ಕಣವಾದ ಚನ್ನಪಟ್ಟಣದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ತನ್ನ ತಂತ್ರಗಾರಿಕೆಯ ಚಾಣಾಕ್ಷತೆ ಮೆರೆದಿದೆ.
ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭದ್ರಕೋಟೆಯಾದ ಶಿಗ್ಗಾಂವಿಯಲ್ಲಿ ಸೋಲುಣಿಸುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ದೊಡ್ಡ ಅಘಾತ ನೀಡಿದೆ. ಇತ್ತ ಸಂಡೂರಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೋಡಿ ಮೋಡಿ ಮಾಡಲು ಸಾಧ್ಯವಾಗಿಲ್ಲ.
ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮಾಡಿದ ಹಲವು ಆರೋಪಗಳ ಮಧ್ಯೆಯೂ ಕಾಂಗ್ರೆಸ್ ಅಭೂತಪೂರ್ವ ಗೆಲುವು ಕಂಡಿದೆ. ಉಪಸಮರದ ಗೆಲುವಿನ ಹಿಂದೆ ಹತ್ತು ಹಲವು ಕಾರಣಗಳಿದ್ದು, ಕೆಲ ತಂತ್ರಗಾರಿಕೆ ಕಾಂಗ್ರೆಸ್ ಪರವಾದ ಜನಾಭಿಪ್ರಾಯ ಮೂಡಲು ಸಾಧ್ಯವಾಯಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಉಪಸಮರದಲ್ಲಿ ಅಹಿಂದ ಮತಗಳು ಕ್ರೋಢೀಕರಣವಾಗಿರುವ ಸಾಧ್ಯತೆ ಹೆಚ್ಚಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ತನಿಖೆ, ಆರೋಪ ಅಹಿಂದ ಮತಗಳು ಒಟ್ಟಾಗಲು ಕಾರಣವಾಗಿದೆ. ಪ್ರತಿಪಕ್ಷಗಳು ಉಪಸಮರದ ರಣಕಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆಗಳನ್ನು ಮಾಡಿ, ಪ್ರಚಾರ ನಡೆಸಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ನನ್ನ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದ್ದು, ಹಿಂದುಳಿದ ನಾಯಕನೆಂದು ನನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಪ್ರಚಾರದ ವೇಳೆ ಬಲವಾದ ತಿರುಗೇಟು ನೀಡಿದ್ದರು.
ಸಿಎಂ ಸಿದ್ದರಾಮಯ್ಯರ ಭಾವನಾತ್ಮಕ ಹೇಳಿಕೆ ಅಹಿಂದ ಸಮುದಾಯವನ್ನು ತಲುಪಿದ್ದು, ಮತ ಕ್ರೋಢೀಕರಣವಾದಂತೆ ಗೋಚರಿಸುತ್ತಿದೆ. ವಿಪಕ್ಷಗಳ ಆರೋಪಗಳು ಜನರ ಮನ ಮುಟ್ಟುವಲ್ಲಿ ವಿಫಲವಾಗಿದೆ. ಅಹಿಂದ ಚಾಂಪಿಯನ್ ಎಂಬ ಹೆಗ್ಗಳಿಕೆ ಗಳಿಸಿರುವ ಸಿಎಂ ಸಿದ್ದರಾಮಯ್ಯ ಪರ ಅಹಿಂದ ವರ್ಗ ಈ ಉಪಸಮರದಲ್ಲಿ ಗಟ್ಟಿಯಾಗಿ ನಿಂತಿರುವುದು ಸ್ಪಷ್ಟವಾಗಿದೆ.
ಕಾಂಗ್ರೆಸ್ ಪಕ್ಷ ಆಡಳಿತಾರೂಢ ಪಕ್ಷವಾಗಿರುವುದರಿಂದ ಉಪಸಮರದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದೆ. ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಇರುವುದರಿಂದ ಸಹಜವಾಗಿ ಮೂರು ಕ್ಷೇತ್ರದ ಜನರು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ ಎಂಬ ಭಾವನೆಯೊಂದಿಗೆ ಮೂರು ಕ್ಷೇತ್ರಗಳ ಮತದಾರರು ಕಾಂಗ್ರೆಸ್ ಕೈ ಹಿಡಿದ್ದಾರೆ.
ಇತ್ತ ಉಪಸಮರದಲ್ಲಿ ಮುಸ್ಲಿಂ ಮತಗಳು ಮತ್ತೆ ಕ್ರೋಢೀಕರಣವಾಗಿದೆ. ಮೂರೂ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳ ಕೈ ಹಿಡಿದಿದೆ. ವಕ್ಫ್ ಆಸ್ತಿ ಗದ್ದಲದಿಂದ ಮುಸ್ಲಿಂ ಸಮುದಾಯ ಉಪಸಮರದಲ್ಲಿ ಮತ್ತಷ್ಟು ಒಟ್ಟಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಬೆನ್ನಿಗೆ ನಿಂತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಗಣನೀಯ ಪ್ರಮಾಣದಲ್ಲಿದ್ದು, ಕಾಂಗ್ರೆಸ್ನ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದಾರೆ.
ವಿಶೇಷವಾಗಿ ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಒಗ್ಗಟ್ಟು ಪ್ರದರ್ಶನ ಮಾಡಿದೆ.
ಮೂರೂ ಕ್ಷೇತ್ರಗಳ ಉಪಸಮರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪರವಾದ ಜನಾದೇಶ ಬರಲು ಕಾರಣವಾಗಿದೆ. ಪಂಚ ಗ್ಯಾರಂಟಿ ಅದರಲ್ಲೂ ಗೃಹ ಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಮತದಾರರನ್ನು ಕಾಂಗ್ರೆಸ್ ನತ್ತ ಸೆಳೆಯುವಂತೆ ಮಾಡಿದೆ.
ಉಪಸಮರದ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲಿದೆ ಎಂಬ ವಿಪಕ್ಷ ನಾಯಕರ ಹೇಳಿಕೆಗಳು ಜನರಲ್ಲಿ ಆತಂಕ ಮೂಡುವಂತೆ ಮಾಡಿರುವ ಸಾಧ್ಯತೆ ಇದೆ. ಜನಪರವಾದ ಕಾರ್ಯಕ್ರಮಗಳು ಸ್ಥಗಿತವಾಗುವ ಭೀತಿಯಲ್ಲಿ ಮತದಾರರು ಉಪಸಮರದಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತಿರುವುದು ಗೋಚರವಾಗುತ್ತಿದೆ.
ವಿಪಕ್ಷಗಳಲ್ಲಿನ ಆಂತರಿಕ ಕಲಹ, ಸ್ಥಳೀಯ ನಾಯಕರ ಅಸಮಾಧಾನ ಕಾಂಗ್ರೆಸ್ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸ್ಪರ್ಧೆಗೆ ನಿಲ್ಲಿಸಿದ್ದು, ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು.
ಜೆಡಿಎಸ್ ಕುಟುಂಬ ರಾಜಕಾರಣದ ಒಳ ಏಟು ಕಾಂಗ್ರೆಸ್ ಗೆಲುವಿಗೆ ಪೂರಕವಾಯಿತು. ಇತ್ತ ಶಿಗ್ಗಾಂವಿಯಲ್ಲೂ ಬೊಮ್ಮಾಯಿ ಪುತ್ರನಿಗೆ ಟಿಕೆಟ್ ನೀಡಿದ್ದೂ, ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಇತ್ತ ಸಂಡೂರಲ್ಲೂ ಬಿಜೆಪಿಯಲ್ಲಿನ ಒಳ ಏಟು ಕಾಂಗ್ರೆಸ್ಗೆ ವರವಾಗಿ ಪರಿಣಮಿಸಿದೆ.
ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನ ಉಪಸಮರದಲ್ಲಿ ಗೆಲುವಿನ ಹಾದಿ ಸುಗಮಗೊಳಿಸಿದೆ. ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಗೆಲುವಿಗೆ ಪ್ಲಸ್ ಆಗಿ ಪರಿಣಮಿಸಿತು.
ಎಲ್ಲಾ ಸಚಿವರು, ಕೈ ನಾಯಕರುಗಳು ಮೂರು ಕ್ಷೇತ್ರಗಳಲ್ಲಿ ಚುನಾವಣಾ ಹೊಣೆಗಾರಿಕೆ ನೀಡಿ, ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಬಣ ರಾಜಕೀಯ, ಆಂತರಿಕ ಕಲಹ, ಸ್ಥಳೀಯ ಅಸಮಾಧಾನವನ್ನು ಶಮನಗೊಳಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕೊಂಡೊಯ್ಯುವಲ್ಲಿ ಕಾಂಗ್ರೆಸ್ ಸಫಲವಾಗಿದೆ.