ಮೈಸೂರು: ಮೈಸೂರಿನ ಬಿಲ್ಡರ್‌ಗಳಿಗೆ ಮುಡಾ ಸಾಮಾನ್ಯ ಸಭೆ ಸಿಹಿ ಸುದ್ದಿ ನೀಡಿದೆ. ಹೊಸದಾಗಿ 300 ಖಾಸಗಿ ಲೇಔಟ್‌ಗಳು ನಿರ್ಮಾಣವಾಗಲಿವೆ.
ಹೊಸ ಬಡಾವಣೆ ನಿರ್ಮಾಣಕ್ಕೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದೆ. ಕಳೆದ ಒಂದೂವರೆ ವರ್ಷಗಳಿಂದ ಹೊಸ ಬಡಾವಣೆ ನಿರ್ಮಾಣಕ್ಕೆ ಅವಕಾಶ ಸಿಗದೆ ಕಂಗಾಲಾಗಿದ್ದ ಬಿಲ್ಡರ್‌ಗಳಿಗೆ ಮುಡಾ ಸಾಮಾನ್ಯ ಸಭೆ ಸಿಹಿ ಸುದ್ದಿ ನೀಡಿದೆ.
ಮುಡಾ ಹಗರಣದ ಬಳಿಕ ಎರಡನೇ ಬಾರಿಗೆ ನಡೆಯುತ್ತಿರುವ ಸಭೆಯಲ್ಲಿ ಮುಡಾ ಸಂಬಂಧ 344 ವಿಷಯಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸುವ ವಿಚಾರವಾಗಿ ಖಾಸಗಿ ಬಿಲ್ಡರ್‌ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಸಲ್ಲಿಕೆಯಾಗಿದ್ದ 300 ಖಾಸಗಿ ಬಡಾವಣೆಗಳ ನಿರ್ಮಾಣ ನಕ್ಷೆಗೆ ಅನುಮೋದನೆ ನೀಡುವ ಮೂಲಕ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.
300 ಹೊಸ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ.ಶನಿವಾರ ಬೆಳಗ್ಗೆ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 300 ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದರಿಂದ ಸಾವಿರಾರು ಮಂದಿ ನಿವೇಶನಾಕಾಂಕ್ಷಿಗಳಿಗೆ ಸೂರು ಸಿಗಲಿದೆ.
ಶೇ.50:50 ಅನುಪಾತದಡಿ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಕಳೆದ ಬಾರಿ ಕೈಗೊಳ್ಳಲಾಗಿದ್ದ ನಿರ್ಣಯ ಸಂಬಂಧ ಸದಸ್ಯರು, ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಅದಕ್ಕೆ ಮುಡಾ ಅಧ್ಯಕ್ಷರಾದ ಜಿಲ್ಲಾಕಾರಿ, ಮುಡಾ ಹಗರಣ ಸಂಬಂಧ ನೇಮಕಗೊಂಡಿರುವ ದೇಸಾಯಿ ಆಯೋಗದ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಮಾಹಿತಿ ನೀಡಿದರು.
ಮೈಸೂರು ಮುಡಾ ಹಗರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ವಿಚಾರಣೆ ನಡೆಸಿದರು. ಲೋಕಾಯುಕ್ತ ಕಚೇರಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ದೇವರಾಜು ಅವರನ್ನು ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ನೇತೃತ್ವದ ಅಧಿಕಾರಿಗಳ ತಂಡವು ಎರಡನೇ ಬಾರಿ ವಿಚಾರಣೆ ನಡೆಸಿತು.
ಪ್ರಕರಣದ 4 ಆರೋಪಿಗಳ ಹೇಳಿಕೆಗಳು ಪರಸ್ಪರ ತಾಳೆ ಆಗದಿರುವ ಕಾರಣಕ್ಕೆ ಹೆಚ್ಚಿನ ಮಾಹಿತಿಗಾಗಿ ದೇವರಾಜು ಅವರಿಗೆ ಮತ್ತೊಮ್ಮೆ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿತ್ತು. ಈ ಕಾರಣ ಅವರು ವಿಚಾರಣೆ ಎದುರಿಸಿದರು. ಬೆಳಗ್ಗೆ 10.30ಕ್ಕೆ ಆಗಮಿಸಿದ ದೇವರಾಜು ಅವರು ಸಂಜೆ 4.30ರವರೆಗೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳ ಹಂಚಿಕೆಯಲ್ಲಿಅಕ್ರಮ ನಡೆದಿದೆ ಎಂಬ ಆರೋಪದಡಿ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ.
ಕೆಸರೆ ಗ್ರಾಮದ ಸರ್ವೆ ನಂರ್ಬ 464 ರಲ್ಲಿನ ತಮ್ಮ 3 ಎಕರೆ 16 ಗುಂಟೆ ಜಮೀನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಾಟ ಮಾಡಿದ್ದರು.
ಕೆಲವು ವರ್ಷಗಳ ಬಳಿಕ ಆ ಜಮೀನನ್ನು ಮಲ್ಲಿಕಾರ್ಜುನಸ್ವಾಮಿ ಸಹೋದರಿ ಪಾರ್ವತಿ ಅವರಿಗೆ ದಾನವಾಗಿ ನೀಡಿದ್ದರು. ಪ್ರಕರಣ ದಾಖಲಾದ ನಂತರ ಪಾರ್ವತಿ ಮುಡಾಕ್ಕೆ ನಿವೇಶನಗಳನ್ನು ವಾಪಸ್ ಮಾಡಿದ್ದರು.
ಸಭೆಯಲ್ಲಿ ಶಾಸಕರಾದ ಜಿಟಿ ದೇವೇಗೌಡ, ತನ್ವೀರ್ ಸೇಠ್, ಡಾ ಡಿ ತಿಮ್ಮಯ್ಯ, ಎಚ್ ವಿಶ್ವನಾಥ್, ಸಿಎನ್ ಮಂಜೇಗೌಡ, ಕೆವಿವೇಕಾನಂದ, ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ದರ್ಶನ್ ಧ್ರುವನಾರಾಯಣ, ಮುಡಾ ಆಯುಕ್ತ ರಘು ನಂದನ್ ಇದ್ದರು.