ಚಿತ್ರದುರ್ಗ: ವಾಣಿವಿಲಾಸ ಸಾಗರ ಡ್ಯಾಂ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಡ್ಯಾಂ ಕಟ್ಟಿದ ಬಳಿಕ 117 ವರ್ಷಗಳಲ್ಲಿ ಇದು 3 ನೇ ಬಾರಿ ಕೋಡಿ ಬಿದ್ದಂತೆ ಆಗುತ್ತದೆ. ಸ್ತುತ ಜಲಾಶಯದ ನೀರಿನ ಮಟ್ಟ 128.05 ಅಡಿ ತಲುಪಿದೆ.
ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ಭರ್ತಿಯಾಗಿ ಕೋಡಿ ಬೀಳಲು ಕೇವಲ 2 ಅಡಿ ನೀರು ಮಾತ್ರ ಬಾಕಿಯಿದೆ.
ಶುಕ್ರವಾರದ ಜಲಾಶಯಕ್ಕೆ 924 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.05 ಅಡಿ ತಲುಪಿದ್ದು, ಕೋಡಿಗೆ ಕ್ಷಣಗಣನೆ ಆರಂಭವಾಗಿದೆ. 1935 ಹಾಗೂ 2022ರಲ್ಲಿ ಕೋಡಿ ಬಿದ್ದಿದ್ದ ಜಲಾಶಯ ಇದೀಗ ಮೂರನೇ ಬಾರಿಗೆ ವಿವಿ ಸಾಗರ ಡ್ಯಾಂ ಕೋಡಿ ಬೀಳುವತ್ತ ಮುಖಮಾಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಒಟ್ಟು 135 ಅಡಿ ಎತ್ತರದ ಹೊಂದಿದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. 1905 ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ನಿರ್ಮಾಣ ಮಾಡಿದ್ದಾರೆ.
ಭದ್ರಾ ಜಲಾಶಯದಿಂದ ಪ್ರತಿದಿನ ಸುಮಾರು 1 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರ ಜೊತೆಗೆ ನಿರಂತರವಾಗಿ ಜಲಾಶಯದ ಮೇಲ್ಭಾಗ ಮಳೆ ಸುರಿದರೆ ಒಂದೆರಡು ದಿನಗಳಲ್ಲಿ ಕೋಡಿ ಬೀಳುತ್ತೆ.
ಜುಲೈ ಅಂತ್ಯದಲ್ಲಿ 113.08 ರಷ್ಟಿದ್ದ ಜಲಾಶಯದ ನೀರಿನ ಮಟ್ಟ ನವೆಂಬರ್ 15ರ ಹೊತ್ತಿಗೆ 128.05 ಅಡಿ ಮುಟ್ಟಿದೆ. ಕೇವಲ ನಾಲ್ಕು ತಿಂಗಳಲ್ಲಿ ಸುಮಾರು 15 ಅಡಿಯಷ್ಟು ನೀರು ಸಂಗ್ರಹವಾಗಿದ್ದು ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಲಿದೆ.
ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಚಿತ್ರದುರ್ಗ ಹಾಗೂ ಹಿರಿಯೂರು ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರಸ್ಥoಭವಾಗಿದೆ.
ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಂತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907 ರಲ್ಲಿ ಜಲಾಶಯ ನಿರ್ಮಿಸಿದ್ದರು.
ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ವಿವಿ ಸಾಗರ ಡ್ಯಾಂ ಕೂಡ ಒಂದಾಗಿದೆ. 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸವಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ “ವೇದಾ” ನದಿ ಕಡೂರಿನ ಬಳಿ “ಅವತಿ” ಎಂಬ ನದಿಯನ್ನು ಸೇರಿ ಮುಂದೆ ‘ವೇದಾವತಿ’ ನದಿಯಾಗಿ ಹರಿಯುತ್ತದೆ.
ವಾಣಿ ವಿಲಾಸ ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು.