ಯಾದಗಿರಿ: ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಘಟಕ ವತಿಯಿಂದ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಪರಿಣಾಮ ಹತ್ತಿಗೆ ದರ ತುಸು ಏರಿಕೆಯಾಗಿದೆ.
ದರ ಇಳಿಕೆಯ ಬೇಸರದಲ್ಲಿದ್ದ ರೈತನಿಗೆ ಸಮಾಧಾನವಾಗಿದೆ. ಪ್ರತಿ ಕ್ವಿಂಟಾಲ್‌ಗೆ 7 ಸಾವಿರ ರೂ.ಮೇಲ್ಪಟ್ಟು ಹತ್ತಿ ಮಾರಾಟವಾಗುತ್ತಿದೆ.
ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಘಟಕದಿಂದ ಯಾದಗಿರಿ ಜಿಲ್ಲೆಯಲ್ಲಿ 21 ಖರೀದಿ ಕೇಂದ್ರ ಆರಂಭದಿಂದಾಗಿ ಮಾರುಕಟ್ಟೆಯಲ್ಲಿ ಹತ್ತಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.
ಹತ್ತಿ ಕ್ವಿಂಟಾಲ್‌ಗೆ 7 ಸಾವಿರ ರೂ.ಮೇಲ್ಪಟ್ಟು ಮಾರಾಟವಾಗುತ್ತಿದೆ. ಹೀಗಾಗಿ ರೈತರು ಖರೀದಿ ಕೇಂದ್ರಗಳಿಗಿಂತ ಜಿನ್ನಿಂಗ್ ಮಿಲ್ ಮಾಲೀಕರಿಗೆ ಹಾಗೂ ಖರೀದಿದಾರರಿಗೆ ಮಾರಾಟ ಮಾಡಲು ಉತ್ಸಾಹ ತೋರುತ್ತಿದ್ದಾರೆ. ಆದರೆ,
ಖರೀದಿ ಕೇಂದ್ರಗಳು ಆರಂಭಿಸುವ ಮುನ್ನ 6500 ರೂ.ನಿಂದ 7 ಸಾವಿರ ರೂ.ನೊಳಗೆ ಕ್ವಿಂಟಾಲ್ ಹತ್ತಿ ಖರೀದಿ ಮಾಡುತ್ತಿದ್ದ ಖರೀದಿದಾರರೀಗ 7 ಸಾವಿರ ರೂ.ಮೇಲ್ಪಟ್ಟು 7,500 ರೂ.ವರೆಗೆ ಖರೀದಿ ಮಾಡುತ್ತಿದ್ದಾರೆ.
ಪರಿಣಾಮವಾಗಿ ಹತ್ತಿ ಬೆಲೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 7 ಸಾವಿರ ರೂ.ಮೇಲ್ಪಟ್ಟು ಸ್ಥಿರಪಟ್ಟಿದೆ.
ಖರೀದಿ ಕೇಂದ್ರಗಳಿಗೆ ಹತ್ತಿ ಮಾರಾಟದಿಂದ ಬಿಲ್ ಬರುವುದು ತಡವಾಗಲಿದೆ. ಆದರೆ, ಖರೀದಿಸಿದ ಕೂಡಲೇ ಹಣ ನೀಡುವ ಖರೀದಿದಾರರಿಗೆ ಹತ್ತಿ ನೀಡಿದರೆ ಅನುಕೂಲವಾಗಲಿದೆ ಎಂಬ ಹಿನ್ನೆಲೆ ಹೊರಗಡೆಯ ಖರೀದಿದಾರರಿಗೆ ಹೆಚ್ಚಿನ ರೈತರು ಹತ್ತಿ ಮಾರಾಟ ಮಾಡುತ್ತಿದ್ದಾರೆ.
ಹತ್ತಿ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದ ರೈತರಿಗೀಗ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ.
ಜಿಲ್ಲೆಯಲ್ಲಿರುವ ಜಿನ್ನಿಂಗ್ ಮಿಲ್‌ನವರು, ಹೊರ ರಾಜ್ಯದಿಂದ ಬಂದ ಖರೀದಿದಾರರು, ಮಿಲ್‌ಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ಹತ್ತಿಯ ಗುಣಮಟ್ಟದ ಆಧಾರದಲ್ಲಿ ಕನಿಷ್ಟ 7,100 ರೂ.ನಿಂದ ಗರಿಷ್ಠ 7,500 ಸಾವಿರ ರೂ.ವರೆಗೆ ಗೆ ಕ್ವಿಂಟಾಲ್ ಹತ್ತಿ ಖರೀದಿಸುತ್ತಿದ್ದಾರೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಹತ್ತಿಗೆ ಸರಕಾರದಿಂದ 7,521 ರೂ.ಬೆಲೆ ನಿಗದಿ ಮಾಡಲಾಗಿದೆ. ಆದರೆ,
ಈ ಹತ್ತಿ ಖರೀದಿ ಕೇಂದ್ರಗಳಲ್ಲೂಹತ್ತಿ ತೇವಾಂಶ ಸೇರಿ ಹತ್ತಾರು ಮಾನದಂಡಗಳೇ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಮಾನದಂಡ ಗೋಜಲಿಗೆ ಹೋಗದೇ ಹೊರಗಡೆಯೇ ಹತ್ತಿ ಮಾರಾಟಕ್ಕೆ ರೈತರು ಮುಂದಾಗಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿಇದುವರೆಗೆ ಹತ್ತಿ ಖರೀದಿ ಕೇಂದ್ರಗಳ ಮೂಲಕ 11,155.4 ಕ್ವಿಂಟಾಲ್ ಹತ್ತಿ ರೈತರಿಂದ ಖರೀದಿಸಲಾಗಿದೆ. ಯಾದಗಿರಿ ವ್ಯಾಪ್ತಿಯ ಖರೀದಿ ಕೇಂದ್ರಗಳಿಂದ 4897.85 ಕ್ವಿಂಟಾಲ್ ಹತ್ತಿ ಖರೀದಿಸಲಾಗಿದೆ.
ಶಹಾಪುರ ವ್ಯಾಪ್ತಿ 3740.3 ಕ್ವಿಂಟಾಲ್ ಹಾಗೂ ಸುರಪುರ ವ್ಯಾಪ್ತಿ 2,517.25 ಕ್ವಿಂಟಾಲ್ ಹತ್ತಿ ಖರೀದಿಸಲಾಗಿದೆ.
ಹೊರ ರಾಜ್ಯದವರು ಇಲ್ಲಿ ಬಂದು ಹತ್ತಿ ಖರೀದಿ ಮಾಡಲು ಅವಕಾಶವಿಲ್ಲ. ಒಂದುವೇಳೆ ಖರೀದಿ ಮಾಡುತ್ತಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ. ಆದರೂ,ರೈತರು ಹತ್ತಿ ಮಾರಾಟ ಮಾಡುವಾಗ ಮೋಸ ಹೋಗದಂತೆ ಜಾಗೃತರಾಗಬೇಕು ಎನ್ನುತ್ತಾರೆ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಯಮನಪ್ಪ ಚಿತಾಪುರ.