ಮೈಸೂರು: ರಾಜ್ಯದಲ್ಲಿ ಗ್ಯಾರಂಟಿಗಳ ಯೋಜನೆ ಮಾತ್ರವಲ್ಲ, ಹೈನುಗಾರರಿಗೆ ಕೊಡುವ ಪ್ರೋತ್ಸಾಹ ಧನವೂ ಬಾಕಿಯಾಗಿದೆ. ರೈತರು ಇಂದಲ್ಲ ನಾಳೆ ಬರುತ್ತದೆ ಎಂದು ದಾರಿಕಾಯುತ್ತಿದ್ದಾರೆ.
ಕಳೆದ ವರ್ಷದ 2 ತಿಂಗಳ ಹಣವೂ ಬಾಕಿಯಾಗಿದ್ದು, ಈ ವರ್ಷವೂ ಬಾಕಿ ಇದೆ ಸರ್ಕಾರ ಬಾಕಿ ಬಿಡುಗಡೆ ಮಾಡಿ ರೈತರನ್ನು ಉಳಿಸಬೇಕೆಂದು ಆಗ್ರಹವಾಗಿದೆ. ಕಬ್ಬ ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕೂಡಾ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ ಹಾಲಿನ ಪ್ರೋತ್ಸಾಹಧನವನ್ನು 8 ತಿಂಗಳಿಂದ ಬಿಡುಗಡೆ ಮಾಡದೆ ನಿರ್ಲಕ್ಷತನ ತೋರಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು.
”ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನವನ್ನು ನೀಡಬೇಕು. ಆದರೆ, ರಾಜ್ಯ ಸರಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಇದು ಸರಕಾರಕ್ಕೆ ಶೋಭೆ ತರುವುದಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಲಿ, ಎಂದು ಒತ್ತಾಯಿಸಿದ್ದಾರೆ.
ಹೈನುಗಾರಿಕೆಗೆ ಪ್ರೋತ್ಸಾಹಿಸಬೇಕು, ರಾಜ್ಯ ಉತ್ತಮ ಹಾಲು ಉತ್ಪಾದನೆಯಲ್ಲಿ ಮುಂದಿದೆ ಎಂದು ಹೇಳುವ ಸರಕಾರ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದೆ ಚೆಲ್ಲಾಟ ಆಡುತ್ತಿದೆ.
ಮೇವಿನ ಬೆಲೆ ಹೆಚ್ಚಳ, ಪಶು ಆಹಾರದ ಬೆಲೆ ಹೆಚ್ಚಳ, ಅತಿ ಮಳೆಯಿಂದಾಗಿ ರಾಸುಗಳಿಗೆ ಆರೋಗ್ಯ ಸಮಸ್ಯೆಗಳು ಮೊದಲಾದ ಸವಾಲುಗಳನ್ನು ಹೈನುಗಾರರು ಎದುರಿಸುತ್ತಿದ್ದು, ಇತ್ತ ಕೈಗೆ ಹಣವೂ ಸಿಗದೇ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.