ಮೈಸೂರು: ರೈತರು ತಾವು ಬೆಳೆದ ಸಿರಿಧಾನ್ಯಗಳನ್ನು ಸಿರಿಧಾನ್ಯಗಳ ಉತ್ಕೃಷ್ಟತಾ ಮತ್ತು ಇನ್ಕ್ಯೂಬೇಶನ್ ಕೇಂದ್ರಕ್ಕೆ ತಂದು ಸಂಸ್ಕರಣೆ ಮಾಡಿ, ತಾವೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅವಕಾಶ ಇದೆ. ಇದು ದೇಶದಲ್ಲೇ ಮೊದಲ ಕೇಂದ್ರವಾಗಿದೆ.
ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ಸಿರಿಧಾನ್ಯ ಪದಾರ್ಥಗಳನ್ನು ಉತ್ಪಾದಿಸುವ ದೇಶ ಭಾರತವಾಗಿದೆ. ಆದರೆ ಸಿರಿಧಾನ್ಯ ಪದಾರ್ಥಗಳನ್ನು ಸಂಸ್ಕರಣೆ ಮಾಡಿ ಬಳಸುವ ವಿಧಾನ ಮತ್ತು ಸೌಲಭ್ಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಸಿ.ಎಫ್.ಟಿ.ಆರ್.ಐ.ನಲ್ಲಿ ಸಿರಿಧಾನ್ಯಗಳ ಉತ್ಕೃಷ್ಟತಾ ಮತ್ತು ಇನ್ಕ್ಯೂಬೇಶನ್ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಇದು ದೇಶದಲ್ಲೇ ಮೊದಲ ಕೇಂದ್ರವಾಗಿದ್ದು, ಶುಕ್ರವಾರ ಸಂಜೆ ರಾಜ್ಯದ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಉದ್ಘಾಟಿಸಿದರು.
ಸಿ.ಎಫ್.ಟಿ.ಆರ್.ಐ. ಸಿರಿಧಾನ್ಯ ಸಂಸ್ಕರಣ ಘಟಕದಿಂದ ರೈತರು, ವ್ಯಾಪಾರಸ್ಥರು, ಉದ್ಯಮಿಗಳು ಸೇರಿ ಎಲ್ಲರಿಗೂ ಇದು ಉಪಯೋಗಕ್ಕೆ ಬರಲಿದೆ. ಈ ಬಗ್ಗೆ ವಿಜ್ಞಾನಿ ಡಾ.ಮೀರಾ ಹಾಗೂ ಸಿ.ಎಫ್.ಟಿ.ಆರ್.ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ವಿವರಿಸಿದ್ದಾರೆ.
ಕೇಂದ್ರದ ಕಾರ್ಯಗಳ ಹಾಗೂ ಉಪಯೋಗದ ಬಗ್ಗೆ ವಿವರಿಸಿದ ವಿಜ್ಞಾನಿ ಡಾ.ಮೀರಾ, “ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಕೆವಿವೈ ಅನುದಾನದ ಅಡಿಯಲ್ಲಿ, ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ಫಂಡ್ ಸಹಯೋಗದಲ್ಲಿ CFTRI ನಲ್ಲಿ ಈ ಸೆಂಟರ್ ಆರಂಭವಾಗಿದೆ.
ಸಿರಿಧಾನ್ಯಗಳ ಹಿಟ್ಟನ್ನು 15 ದಿನಗಳವರೆಗೆ ಬಳಸುವುದು ಕಷ್ಟ, ಆದರೆ ಇಲ್ಲಿರುವ ತಂತ್ರಜ್ಞಾನ ಬಳಸಿ 10 ತಿಂಗಳವರೆಗೆ ಬಳಸಬಹುದು. ಇಲ್ಲಿ 1 ಟನ್ ಸಿರಿಧಾನ್ಯ ಸಂಸ್ಕರಣೆ ಮಾಡಬಹುದಾಗಿದೆ. ರಾಗಿಯನ್ನು ರಾಗಿ ರೈಸ್ ಆಗಿ ಕೂಡ ಮಾಡಬಹುದು.” ಎಂದು ತಿಳಿಸಿದರು.
ಈ ಕೇಂದ್ರದಲ್ಲಿ ಮೂರು ವಿಧದ ಚಟುವಟಿಕೆಗಳು ನಡೆಯಲಿವೆ. ಮೊದಲನೇಯದಾಗಿ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿ ಪ್ಯಾಕೆಟ್ ಮಾಡುವುದು. ಎರಡನೇಯದಾಗಿ ಸಿರಿಧಾನ್ಯಗಳಿಂದ ಆಹಾರ ಉತ್ಪನ್ನಗಳ ತಯಾರಿಕೆ. ಮೂರನೇಯದಾಗಿ ಸಿರಿಧಾನ್ಯಗಳನ್ನು ಹಾಳಾಗದ ರೀತಿ ದೀರ್ಘಕಾಲ ಬಳಕೆಗೆ ಬರುವ ಹಾಗೇ ಸಂಸ್ಕರಿಸುವ ತಂತ್ರಜ್ಞಾನವಿದೆ.
ಈ ಕೇಂದ್ರದಲ್ಲಿ, ರೈತರು ತಾವು ಬೆಳೆದ ಸಿರಿಧಾನ್ಯಗಳನ್ನು ಇಲ್ಲಿಗೆ ತಂದು ಸಂಸ್ಕರಣೆ ಮಾಡಿ, ತಾವೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದಾದ ಅನುಕೂಲವಿದೆ. ಇದರಿಂದ ಲಾಭವೂ ಹೆಚ್ಚುತ್ತದೆ. ಜತೆಗೆ ಇಲ್ಲಿರುವ ತಂತ್ರಜ್ಞಾನ ಮತ್ತು ಯಂತ್ರಗಳನ್ನು ಸಹ ಸಿ.ಎಫ್.ಟಿ.ಆರ್.ಐ.ನಿಂದ ಪಡೆಯಬಹುದಾಗಿದೆ.
“ಒಂದು ಗಂಟೆಯಲ್ಲಿ 300-500 ಕೆ.ಜಿ. ರಾಗಿ ರೈಸ್ ತಯಾರು ಮಾಡಬಹುದಾದ ಸಾಮಾರ್ಥ್ಯದ ತಂತ್ರಜ್ಞಾನ ಇಲ್ಲಿದೆ. ಬೇಕಿಂಗ್ ಲೈನ್ನಲ್ಲಿ 5 ಸಾವಿರ ಬ್ರೆಡ್ ತಯಾರು ಮಾಡಬಹುದಾಗಿದೆ. ಮತ್ತು ಕುಕ್ಕೀಸ್, ಬಿಸ್ಕೆಟ್ಗಳನ್ನು ಕೂಡ ಮಾಡಬಹುದಾಗಿದೆ. ಪ್ಯಾಕಿಂಗ್ ಲೈನ್ನಲ್ಲಿ 250 ಕೆ.ಜಿ. ಪ್ಯಾಕಿಂಗ್ ಸಾಮರ್ಥ್ಯ ಇದೆ.
8 ರಿಂದ 10 ಜನರ ತಂಡ ಈ ಇನ್ಕ್ಯೂಬೇಶನ್ ಉಪಯೋಗಿಸಿ ಅವರದೇ ಪದಾರ್ಥಗಳನ್ನು ತಯಾರು ಮಾಡಬಹುದು. ಇದು ಹಲವು ಪ್ರಯೋಜನಗಳ ಅಡಿಯಲ್ಲಿ ರೈತರಿಗೆ, ರೈತರೇತರಿಗೆ, ಸಾರ್ವಜನಿಕರಿಗಾಗಿ ಆರಂಭವಾಗಿರುವ ಕೇಂದ್ರವಾಗಿದೆ” ಎಂದರು.
ಸೆಲ್ಫ್ ಸ್ಟೆಬಲ್ ಜೋವರ್ ಹಿಟ್ಟು ತಂತ್ರಜ್ಞಾನ, ಡಿಕೋಟಿಕೇಟೆಡ್ ರಾಗಿ ತಂತ್ರಜ್ಞಾನ, ಫ್ಲೇಕಿಂಗ್ ಆಫ್ ಮಿಲೆಟ್ ತಂತ್ರಜ್ಞಾನ, ಸಮೋಲೀನಾ ತಂತ್ರಜ್ಞಾನಗಳನ್ನು CFTRI ಅವಿಷ್ಕಾರ ಮಾಡಿದೆ.
“ತಂತ್ರಜ್ಞಾನದ ಅರಿವು ಇದ್ದವರಿಗೆ ಯಂತ್ರಗಳು ಇರುವುದಿಲ್ಲ. ಹೆಚ್ಚಿನ ದುಡ್ಡು ಕೊಟ್ಟು ಯಂತ್ರ ಖರೀದಿ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಅಂತಹವರಿಗೆ ಇದು ತುಂಬಾ ಸಹಯವಾಗಲಿದೆ. ನಾವು ಸಿರಿಧಾನ್ಯಗಳ ಬಗೆಗೆ ತಿಳುವಳಿಕೆ ನೀಡುತ್ತೇವೆ. ಇಲ್ಲಿಗೆ ಬಂದು ತಮ್ಮ ಉತ್ಪನ್ನದ ಮೌಲ್ಯ ವೃದ್ಧಿಸಿಕೊಳ್ಳಬಹುದು” ಎಂದು ಮಾಹಿತಿ ಹಂಚಿಕೊಂಡರು.
ಸಿರಿಧಾನ್ಯ ಕುರಿತು CFTRI 200ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರಡಿಸಿದೆ. 2 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿದ್ದೇವೆ. ಈ ಕೇಂದ್ರವನ್ನು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ” ಎಂದು ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ವಿವರಿಸಿದರು.