ಚಾಮರಾಜನಗರ: ದೇಶದಲ್ಲೇ ಮೊದಲ ಬಾರಿಗೆ ಅರಣ್ಯ ಕಾವಲಿಗೆ ಬಂಡೀಪುರದಲ್ಲಿ ಶ್ವಾನ ತರಬೇತಿ ಕೇಂದ್ರ ತೆರೆಯಲಾಗಿದೆ. ಇಲ್ಲಿ ಶ್ವಾನಗಳಿಗೆ ತರಬೇತಿ ನೀಡಿ ಅರಣ್ಯ ಕಾವಲಿಗೆ ನಿಯೋಜಿಸಲಾಗುತ್ತದೆ.
ಕಳ್ಳಬೇಟೆ ಮತ್ತು ಅರಣ್ಯ ಸಂಪತ್ತು ಲೂಟಿ ತಡೆಯಲು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶ್ವಾನ ತರಬೇತಿ ಕೇಂದ್ರ ತೆರೆಯಲಾಗಿದೆ. ಇದು ದೇಶದ ಮೊದಲ ಕೇಂದ್ರವಾಗಿದೆ.
ಕಳ್ಳಬೇಟೆ ಮತ್ತು ಅರಣ್ಯ ಮೊಕದ್ದಮೆಗಳನ್ನು ಭೇದಿಸಲು ಸಹಕಾರಿಯಾಗುವಂತೆ ಶ್ವಾನ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಅರಣ್ಯ ಇಲಾಖೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದ್ದ ಬೆಲ್ಜಿಯಂ ಶೆಪರ್ಡ್ ಶ್ವಾನಗಳನ್ನು ಈಗ ಅರಣ್ಯ ಕಾವಲಿಗೆ ಬಳಸಲು ನಿರ್ಧರಿಸಿದೆ.
ನಿಪುಣ ಚಾಕಚಕ್ಯತೆಗೆ ಹೆಸರು ವಾಸಿಯಾಗಿರುವ ಬೆಲ್ಜಿಯಂ ಶೆಪರ್ಡ್ ಶ್ವಾನವು ಅರಣ್ಯದೊಳಗೆ ಅಪರಾಧಿಗಳು ಮತ್ತು ಸ್ಫೋಟಕಗಳನ್ನ ಪತ್ತೆ ಹಚ್ಚುವ ಕೆಲಸ ಮಾಡಲಿದೆ. ತರಬೇತಿ ಪೂರ್ಣಗೊಂಡ ಬಳಿಕ ದಟ್ಟ ಅರಣ್ಯದಲ್ಲಿ ಈ ಶ್ವಾನಗಳನ್ನ ಕಾರ್ಯಾಚರಣೆಗೆ ಬಳಸಬಹುದಾಗಿದ್ದು, ರಾಷ್ಟ್ರದಲ್ಲೇ ಮೊದಲ ಬಾರಿಗೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ 20 ಸಿಬ್ಬಂದಿ ತಂಡದೊಂದಿಗೆ 12 ಶ್ವಾನಗಳನ್ನು ಒಳಗೊಂಡ ತರಬೇತಿ ಕೇಂದ್ರ ತೆರೆದಿರುವುದು ವಿಶೇಷವಾಗಿದೆ.
ಪ್ರಸ್ತುತ 8 ಶ್ವಾನಗಳನ್ನು ಬರಮಾಡಿಕೊಳ್ಳಲಾಗಿದ್ದು, ಅಕ್ಟೋಬರ್ 2025 ರವರೆಗೆ ಶ್ವಾನಗಳಿಗೆ ನುರಿತ ತರಬೇತಿ ನೀಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತರಬೇತಿ ಪೂರ್ಣಗೊಂಡ ಬಳಿಕ ಬಂಡೀಪುರ, ನಾಗರಹೊಳೆ, ಭದ್ರಾ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾಳಿ ರಕ್ಷಿತಾರಣ್ಯಗಳಿಗೆ ಶ್ವಾನಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ 10 ಶ್ವಾನಗಳಿಗೆ ತರಬೇತಿ ಕೊಟ್ಟು ಅರಣ್ಯ ಕಾವಲಿಗೆ ನಿಯೋಜಿಸಲಾಗುತ್ತದೆ. ಈ ಹಿಂದೆ, ಹರಿಯಾಣದಲ್ಲಿ ITBP ತರಬೇತುದಾರರು ಶ್ವಾನಗಳಿಗೆ ತರಬೇತಿ ಕೊಡುತ್ತಿದ್ದರು. ಈಗ ಅರಣ್ಯ ಇಲಾಖೆ ವತಿಯಿಂದಲೇ ತರಬೇತಿ ಕೊಡಲಿದ್ದು, ದೇಶದಲ್ಲಿ ಮೊದಲ ಬಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಗೊಂಡಿದೆ.
ಶ್ವಾನ ತರಬೇತಿ ನೂತನ ಕೇಂದ್ರವನ್ನು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಮತ್ತು ರಮೇಶ್ ಕುಮಾರ್ ಸೋಮವಾರ ಉದ್ಘಾಟಿಸಿದ್ದಾರೆ.