ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೈಪರ್ ಟೆಕ್ನಾಲಜೀಸ್ ಕಂಪೆನಿಯಲ್ಲಿ ಕ್ರಿಪ್ಟೊ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಆರೋಪಿ ಶುಭಾಂಗ್ ಜೈನ್ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದು ವರ್ಷದ ಬಳಿಕ ಕಂಪೆನಿಯ ಖಾತೆಯಲ್ಲಿದ್ದ ಕ್ರಿಪ್ಟೊ ಕರೆನ್ಸಿ ವಾಲೆಟ್ ಪಾಸ್‍ವರ್ಡ್ ಅನ್ನು ಮಾಲೀಕರ ಗಮನಕ್ಕೆ ತರದೇ ಬದಲಾಯಿಸಿದ್ದ.
ಬೆಂಗಳೂರು: ಕ್ರಿಪ್ಟೋಕರೆನ್ಸಿ ವರ್ಗಾವಣೆ ಮಾಡಿ ವಂಚಿಸಿದ್ದ ಆರೋಪಿಯೊಬ್ಬನನ್ನು ಅಪರಾಧ ತನಿಖಾ ವಿಭಾಗದ (ಸಿಐಡಿ) ಅಧಿಕಾರಿಗಳು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಹರಿಯಾಣ ಮೂಲದ ಶುಭಾಂಗ್ ಜೈನ್ (26) ಬಂಧಿತ ಆರೋಪಿ. ಸೈಪರ್ ಟೆಕ್ನಾಲಜೀಸ್ ಪ್ರೈವೇಟ್ ಕಂಪೆನಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ(ಸಿಇಒ) ಅಖಿಲ್ ಗುಪ್ತ ಎಂಬುವರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ.
ದೂರು ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‍ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದ ತಂಡವು ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದೆ ಎಂದು ತಿಳಿದುಬಂದಿದೆ.
ಕೋಟ್ಯಂತರ ರೂ. ವಂಚನೆ ಸಂಬಂಧ ಆರೋಪಿ ಶುಭಾಂಗ್ ಜೈನ್‍ನ ಬ್ಯಾಂಕ್ ಅಕೌಂಟ್‌ನ್ನು ಮುಟ್ಟುಗೋಲು ಹಾಕಲಾಗಿದೆ. ಕ್ರಿಪ್ಟೊ ವಾಲೆಟ್‍ನಿಂದ ಯಾರಿಗೆ ಎಷ್ಟು ಹಣ ನೀಡಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅಲ್ಲದೇ, ತನಿಖೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು (ಸಿಐಡಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೈಪರ್ ಟೆಕ್ನಾಲಜೀಸ್ ಕಂಪೆನಿಯಲ್ಲಿ ಕ್ರಿಪ್ಟೊ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಆರೋಪಿ ಶುಭಾಂಗ್ ಜೈನ್ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದು ವರ್ಷದ ಬಳಿಕ ಕಂಪೆನಿಯ ಖಾತೆಯಲ್ಲಿದ್ದ ಕ್ರಿಪ್ಟೊ ಕರೆನ್ಸಿ ವಾಲೆಟ್ ಪಾಸ್‍ವರ್ಡ್ ಅನ್ನು ಮಾಲೀಕರ ಗಮನಕ್ಕೆ ತರದೇ ಬದಲಾಯಿಸಿದ್ದ. ಖಾತೆಯಲ್ಲಿದ್ದ ಸುಮಾರು 56 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ವರ್ಗಾಯಿಸಿ ವಂಚಿಸಿದ್ದ ಎಂದು ತಿಳಿದುಬಂದಿದೆ.