ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) 150 ಉಳಿಕೆ ಮೂಲ ವೃಂದದ ಗ್ರೂಪ್-‘ಸಿ’ ಹುದ್ದೆಗಳ ನೇಮಕಾತಿಗಾಗಿ ಡಿ. 7 ಮತ್ತು 8ರಂದು ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ (PDO Exam) ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಪಿಡಿಒ ಹುದ್ದೆಗಳ ನೇಮಕಾತಿಗಾಗಿ 2024ರ ಮಾರ್ಚ್ 15ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್ ಮೂಲಕ ಹಾಲ್ ಟಿಕೆಟ್ (Hall ticket) ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ನೇಮಕಾತಿಗೆ ಡಿ.7 ಮತ್ತು 8ರಂದು ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರವನ್ನು ಆಯೋಗದ ವೆಬ್ ಸೈಟ್ http://kpsc.kar.nic.inನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಪರೀಕ್ಷೆಯ ವೇಳಾಪಟ್ಟಿಯು ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ ಎಂದು ಆಯೋಗ ತಿಳಿಸಿದೆ.
ತಮ್ಮದೇ ಆದ ಲಿಪಿಕಾರರನ್ನು ಕರೆತರುವ ವಿಶೇಷ ಚೇತನ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಲಿಪಿಕಾರರ ಪ್ರವೇಶ ಪತ್ರವನ್ನು ಸಹ ಡೌನ್ ಲೋಡ್ ಮಾಡಿಕೊಳ್ಳಬೇಕು.
ಪಿಡಿಒ ನೇಮಕಾತಿಗೆ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಡಿ.7ರಂದು ನಡೆಯುವ ಕನ್ನಡ ಭಾಷಾ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕ ಗಳಿಸಿದವರು ಆಯ್ಕೆ ಪ್ರಕ್ರಿಯೆಗೆ ಅರ್ಹರಾಗುತ್ತಾರೆ.
ಹೈ.ಕ ವೃಂದದ 97 ಪಿಡಿಒ ಹುದ್ದೆ ಹಾಗೂ ಉಳಿಕೆ ಮೂಲವೃಂದದ 150 ಪಿಡಿಒ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಹೈ.ಕ ವೃಂದದ 97 ಪಿಡಿಒ ಹುದ್ದೆಗಳಿಗೆ ನ.16 ಮತ್ತು ನ.17ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಉಳಿಕೆ ಮೂಲವೃಂದದ 150 ಹುದ್ದೆ ನೇಮಕಾತಿಗೆ ಡಿ.7 ಮತ್ತು 8ರಂದು ಪರೀಕ್ಷೆ ನಡೆಯಲಿದೆ.
ಡಿ. 8ರಂದು ಪಿಡಿಒ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇದರಲ್ಲಿ ಪತ್ರಿಕೆ-1 ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಭೂಗೋಳಶಾಸ್ತ್ರ, ಸಮಾಜ ವಿಜ್ಞಾನ, ಸಂವಿಧಾನ, ಇತಿಹಾಸ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ವಸ್ತುನಿಷ್ಠ ಬಹು ಆಯ್ಕೆಯ 100 ಪ್ರಶ್ನೆಗಳು ಇರುತ್ತವೆ.
ಪತ್ರಿಕೆ-2ರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಕುರಿತ ವಿಷಯಕ್ಕೆ ಸಂಬಂಧಿಸಿದ 100 ಪ್ರಶ್ನೆಗಳು ಇರುತ್ತವೆ. ಇದು ಕೂಡ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.