ತಮಿಳುನಾಡು: ಶಬರಿಮಲೆ ಯಾತ್ರೆ ಋತು ಆರಂಭವಾಗಿದ್ದು, ವಿವಿಧ ರಾಜ್ಯಗಳಿಂದ ಭಕ್ತರು ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನ ನಿರೀಕ್ಷೆ ಇರುವುದರಿಂದ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಇದೀಗ ರೈಲಿನಲ್ಲಿ ಶಬರಿಮಲೆಗೆ ತೆರಳುವ ಭಕ್ತರಿಗೆ ದಕ್ಷಿಣ ರೈಲ್ವೆ ಚೆನ್ನೈ ವಿಭಾಗ ಸೂಚನೆಯೊಂದನ್ನು ರವಾನಿಸಿದೆ. ನಿಯಮ ಮೀರಿದರೆ ದಂಡ ಅಥವಾ ಜೈಲು ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿದೆ. ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗವು ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಭಕ್ತರು ರೈಲಿನಲ್ಲಿ ಹಾಗೂ ರೈಲು ನಿಲ್ದಾಣದಲ್ಲಿ ಕರ್ಪೂರ ಬೆಳಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಕೆಲ ಭಕ್ತರು ತಮ್ಮ ಪ್ರಯಾಣದ ಅವಧಿಯಲ್ಲಿ ಕರ್ಪೂರ ಬೆಳಗುತ್ತಾರೆ. ಇದರಿಂದ ಬೆಂಕಿ ಅವಘಡ ಸಂಭವಿಸುವ ಅಪಾಯ ಇರುತ್ತದೆ. ಹೀಗಾಗಿ ರೈಲ್ವೆ ಪ್ರಯಾಣಿಕರ ಹಾಗೂ ರೈಲ್ವೆ ಆಸ್ತಿಗಳ ಸುರಕ್ಷತೆ ದೃಷ್ಟಿಯಿಂದ ಕರ್ಪೂರ ಬೆಳಗದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದೇವೆ.
ಕರ್ಪೂರ ಅಥವಾ ಇತರೆ ಯಾವುದೇ ಬೆಂಕಿ ಹಚ್ಚುವ ಚಟುವಟಿಕೆ ಮಾಡಬಾರದು ಎಂದು ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಿಂದ ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ ಸೇವೆ ನ.29ರಿಂದ ಆರಂಭವಾಗಿದೆ. ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ಈ ವೋಲ್ವೋ ಬಸ್ ಓಡಾಟ ನಡೆಸುತ್ತಿದೆ.
ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡುವ ಬಸ್, ಮರುದಿನ ಬೆಳಗ್ಗೆ 6.45ಕ್ಕೆ ನೀಲಕ್ಕಲ್ ತಲುಪುತ್ತದೆ. ನೀಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 10ಕ್ಕೆ ಬೆಂಗಳೂರು ತಲುಪುತ್ತದೆ. ಪ್ರಯಾಣ ದರ ವಯಸ್ಕರಿಗೆ 1,750 ರೂ. ನಿಗದಿಪಡಿಸಲಾಗಿದೆ.
1989ರ ರೈಲ್ವೆ ಕಾಯ್ದೆಯ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ ದಹಿಸುವ ಮತ್ತು ಸ್ಫೋಟಕ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದು ಅಥವಾ ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಭಕ್ತರು ನಿಯಮ ಉಲ್ಲಂಘಿಸಿದಲ್ಲಿ, 1,000 ರೂ.ವರೆಗೆ ದಂಡ ಹಾಗೂ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಥವಾ ಉಂಟಾದ ಹಾನಿಗೆ ಭಕ್ತರೇ ಜವಾಬ್ದಾರರಾಗಿರುತ್ತಾರೆ ಎಂದು ರೈಲ್ವೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಯಾತ್ರಾ ವಲಯದಾದ್ಯಂತೆ ಸುರಕ್ಷತೆ ದೃಷ್ಟಿಯಿಂದ ಐದು ಹಂತಗಳಲ್ಲಿ ಸುಮಾರು 14,000 ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ನಿಲಕ್ಕಲ್‌ನಲ್ಲಿ 10,000 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕೇರಳದ ಪ್ರಮುಖ ಯಾತ್ರಾಸ್ಥಳವಾಗಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಜನವರಿ 15ರವರೆಗೆ ತೆರದಿರುತ್ತದೆ. ಕೇರಳ ಹೊರತುಪಡಿಸಿ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ತೆರಳುತ್ತಾರೆ.