ಹೈದರಾಬಾದ್: ತೆಲಂಗಾಣದ ಪೆದ್ದಪಲ್ಲಿ ಮತ್ತು ರಾಮಗುಂಡಂ ನಡುವಿನ ರಾಘವಪುರದಲ್ಲಿ ಮಂಗಳವಾರ ರಾತ್ರಿ ಗೂಡ್ಸ್ ರೈಲು ಹಳಿತಪ್ಪಿದೆ. ಗೂಡ್ಸ್ ವ್ಯಾಗನ್‌ಗಳು ಕಳಚಿ ಬಿದ್ದಿದ್ದರಿಂದ ಹಳಿಗಳು ಕಿತ್ತು ಹೋಗಿವೆ. ಇದರಿಂದ ಈ ಮಾರ್ಗದ ರೈಲ್ವೆ ಸಂಚಾರ ಪೂರ್ಣ ರದ್ದಾಗಿದೆ.
ಗೂಡ್ಸ್ ರೈಲು ಕಬ್ಬಿಣದ ಸರಳುಗಳನ್ನು ತುಂಬಿ ಸಾಗುತ್ತಿತ್ತು. ಈ ವೇಲೆ ರಾಘವಪುರದ ಬಳಿಕ ಸಂಚರಿಸುತ್ತಿದ್ದಾಗ, ಅಚಾನಕ್ಕಾಗಿ ಬೋಗಿಗಳ ನಡುವಿನ ಕೊಂಡಿ ಮುರಿದು ಹೋಗಿದೆ. ಇದರಿಂದ 11 ವ್ಯಾಗನ್‌ಗಳು ಉರುಳಿ ಬಿದ್ದಿವೆ. ಒಂದರ ಮೇಲೊಂದು ಬೋಗಿ ಬಿದ್ದಿದ್ದರಿಂದ ಇಲ್ಲಿನ ಮೂರು ಹಳಿಗಳಿಗೆ ತೀವ್ರ ಹಾನಿಯಾಗಿದೆ.
ಗೂಡ್ಸ್ ರೈಲಿನ ವ್ಯಾಗನ್‌ಗಳು ಪಲ್ಟಿಯಾಗಿ ಹಳಿ ಕಿತ್ತಿದ್ದರಿಂದ ಈ ಮಾರ್ಗವಾಗಿ ಸಂಚರಿಸುವ 39 ರೈಲುಗಳನ್ನು ಸಂಪೂರ್ಣ ಮತ್ತು 7 ಭಾಗಶಃ ರದ್ದು ಮಾಡಲಾಗಿದೆ. ದೆಹಲಿ-ಚೆನ್ನೈ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಘಟನೆ ನಡೆದ ಬಳಿಕ ರೈಲ್ವೆ ಅಧಿಕಾರಿಗಳು ತಕ್ಷಣವೇ ಹಳಿಯನ್ನು ಸರಿಪಡಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ರಾತ್ರಿಯಿಂದಲೇ ಹಳಿ ಜೋಡಿಸುವ ಕೆಲಸ ನಡೆಯುತ್ತಿದೆ.
ದಕ್ಷಿಣ ಮಧ್ಯ ರೈಲ್ವೆ ವಿಭಾಗದ 39 ರೈಲುಗಳು ರದ್ದಾಗಿವೆ. 7 ರೈಲುಗಳು ಭಾಗಶಃ ಸಂಚಾರ ನಿಲ್ಲಿಸಿವೆ. 53 ರೈಲುಗಳ ಮಾರ್ಗ ಬದಲಿಸಲಾಗಿದೆ. 7 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.
ನರಸಾಪುರ-ಸಿಕಂದರಾಬಾದ್, ಸಿಕಂದರಾಬಾದ್-ನಾಗ್ಪುರ, ಹೈದರಾಬಾದ್-ಸಿರ್ಪುರ್ ಖಗಜ್‌ನಗರ, ಸಿಕಂದರಾಬಾದ್-ಸಿರ್ಪುರ್ ಟೌನ್, ಸಿರ್ಪುರ್ ಟೌನ್-ಕರೀಂನಗರ, ಕರೀಂನಗರ-ಬೋಧನ್, ಸಿರ್ಪುರ್ ಟೌನ್-ಭದ್ರಾಚಲಂ ರಸ್ತೆ, ಭದ್ರಾಚಲಂ ರಸ್ತೆ-ಬಲ್ಲಾರಶಾ- ಕಾಜಿಪೇಟ್, ಯಶವಂತಪುರ-ಮುಜರಗುಡ ಕರೀಂನಗರ, ಸಿಕಂದರಾಬಾದ್-ರಾಮೇಶ್ವರಂ, ಸಿಕಂದರಾಬಾದ್-ತಿರುಪತಿ, ಅದಿಲಾಬಾದ್-ಪರ್ಲಿ, ಅಕೋಲಾ-ಪೂರ್ಣ, ಆದಿಲಾಬಾದ್-ನಾಂದೇಡ್, ನಿಜಾಮಾಬಾದ್-ಕಾಚಿಗುಡ, ಗುಂತಕಲ್ಲು-ಬೋಧನ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ರಾಘವಪುರ ಬಳಿ ರೈಲ್ವೆ ಹಳಿಗಳ ಪುನಶ್ಚೇತನ ಕಾಮಗಾರಿಯು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಟ್ರ್ಯಾಕ್ ಮೇಲೆ ಉರುಳಿದ ಸರಕು ತುಂಬಿರುವ ವ್ಯಾಗನ್ಗಳನ್ನು ಸಿಬ್ಬಂದಿ ತೆರವು ಮಾಡುತ್ತಿದ್ದಾರೆ. ನಾಶವಾಗಿರುವ ವಿದ್ಯುತ್ ತಂತಿಗಳನ್ನು ಮರುಸ್ಥಾಪಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಹೊಸ ಹಳಿಗಳನ್ನು ತಂದು ತ್ವರಿತವಾಗಿ ಅಳವಡಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿ ಅರುಣ್ ಕುಮಾರ್ ಜೈನ್ ಅವರು ಕಾಮಗಾರಿಯ ಮೇಲುಸ್ತುವಾರಿ ವಹಿಸಿದ್ದಾರೆ.