ನವದೆಹಲಿ: ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡುವಂತೆ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಕುರಿತು ತಮ್ಮೊಂದಿಗೆ ಚರ್ಚಿಸಲು ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಅರವಿಂದ ಕೇಜ್ರಿವಾಲ್ ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು.
“ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಆದರೂ, ದೆಹಲಿ ಈಗ ದೇಶ ಮತ್ತು ವಿದೇಶಗಳಲ್ಲಿ ಅಪರಾಧಗಳ ರಾಜಧಾನಿ ಎಂದು ಬಿಂಬಿಸಿಕೊಳ್ಳುತ್ತಿದೆ.
ಭಾರತದ 19 ಮೆಟ್ರೋ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಕೊಲೆ ಪ್ರಕರಣಗಳಲ್ಲಿಯೂ ಮೊದಲ ಸ್ಥಾನದಲ್ಲಿದೆ. ಸುಲಿಗೆ, ದರೋಡೆ ನಡೆಸುವ ಗ್ಯಾಂಗ್ಗಳು ಸಕ್ರಿಯವಾಗಿವೆ. ವಿಮಾನ ನಿಲ್ದಾಣಗಳು ಮತ್ತು ಶಾಲೆಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ.
ಇಂತಹ ಕೃತ್ಯಗಳಿಂದ ದೆಹಲಿಯ ಜನರು ಅಭದ್ರತೆ ಅನುಭವಿಸುತ್ತಿದ್ದಾರೆ. ದೆಹಲಿಯ ಐಷಾರಾಮಿ ಪ್ರದೇಶವಾಗಲಿ ಅಥವಾ ಇನ್ನಾವುದೇ ಪ್ರದೇಶವಾಗಲಿ, ಇಂದು ತಾಯಂದಿರು ತಮ್ಮ ಮಕ್ಕಳ ಬಗ್ಗೆ ಚಿಂತಿತರಾಗಿದ್ದಾರೆ. ಉದ್ಯಮಿಗಳು ತಮ್ಮ ವ್ಯವಹಾರದ ಬಗ್ಗೆ ಅಸುರಕ್ಷಿತ ಭಾವನೆ ಅನುಭವಿಸುತ್ತಿದ್ದಾರೆ.
ದರೋಡೆಕೋರರು ಸಿನಿಮಾಗಳ ಮಾದರಿಯಲ್ಲಿ ಶೂಟೌಟ್ ಮಾಡುತ್ತಿದ್ದಾರೆ. ಹಗಲಿನಲ್ಲೇ ಗುಂಡಿನ ದಾಳಿ, ಕೊಲೆ ಮತ್ತು ಅಪಹರಣಗಳು ನಡೆಯುತ್ತಿವೆ. ಈ ಕೃತ್ಯಗಳಿಗೆ ಮುಕ್ತಿ ಸಿಗಬೇಕು. ಅಪರಾಧಗಳ ರಾಜಧಾನಿ ಎಂಬ ನಾಮಾಂಕಿತದಿಂದ ದೆಹಲಿ ಹೊರಬರಬೇಕಿದೆ” ಎಂದು ಅಪರಾಧ ಅಂಕಿಅಂಶಗಳನ್ನು ಉಲ್ಲೇಖಿಸಿ, ಕೇಜ್ರಿವಾಲ್ ಅವರು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
“ಸರ್ಕಾರ ರಚಿಸಿದ ನಂತರ ಸಾರ್ವಜನಿಕರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಂಪೂರ್ಣ ಜವಾಬ್ದಾರಿಯನ್ನು ದೆಹಲಿಯ ಜನರು ಅವರಿಗೆ (ಕೇಂದ್ರ) ನೀಡಿದ್ದರು.
ದೆಹಲಿ ಅರ್ಧ ರಾಜ್ಯ ಆದ್ದರಿಂದ ಅರ್ಧ ಜವಾಬ್ದಾರಿ ದೆಹಲಿ ಸರ್ಕಾರದ್ದು, ಇನ್ನರ್ಧ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ದಿಲ್ಲಿ ಪೊಲೀಸರ ಮೇಲೆ ನಮ್ಮ ಸರ್ಕಾರ ನಿಯಂತ್ರಣ ಹೊಂದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಆದರೆ, ದೆಹಲಿಯ ಜನತೆಗೆ ಭದ್ರತೆ ಒದಗಿಸುವ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಗಲ ಮೇಲೆ ಪ್ರತಿಯೊಬ್ಬರಿಗೂ ಭದ್ರತೆ ಒದಗಿಸುವ ಹೊಣೆಗಾರಿಕೆ ಇದೆ. ಆದರೆ, ಅವರು ಚುನಾವಣೆಗಳಲ್ಲಿ ನಿರತರಾಗಿದ್ದರಿಂದ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ” ಎಂದು ಕೇಜ್ರಿವಾಲ್ ಅವರು ಅಮಿತ್ ಶಾ ಸೇರಿ ಕೇಂದ್ರದ ವಿರುದ್ಧ ಕಿಡಿಕಾರಿದ್ದರು.
ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಶನಿವಾರ ಬೆಳಗ್ಗೆ ವಿಶ್ವಾಸ್ ನಗರದಲ್ಲಿ ಉದ್ಯಮಿ ಸುನೀಲ್ ಜೈನ್ ಅವರನ್ನು ಹಗಲು ಹೊತ್ತಿನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಅಪರಾಧಿಗಳು ಹೇಗೆ ನಿರ್ಭೀತರಾದರು? ಬೆದರಿಕೆ ಕರೆಗಳಿಂದ ಹಲವು ಪ್ರಮುಖರು ದೆಹಲಿಯನ್ನು ತೊರೆಯುವ ಪರಿಸ್ಥಿತಿ ಬಂದಿದೆ ಎಂದು ಹರಿಹಾಯ್ದರು.
ದೆಹಲಿಯಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ವರದಿಯಾಗುತ್ತಿವೆ. ದೆಹಲಿ ಪೊಲೀಸರು ದೆಹಲಿ ನಿವಾಸಿಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ.
ದೆಹಲಿ ಮತದಾರರು ಶಾಲೆ ಮತ್ತು ಆಸ್ಪತ್ರೆಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾರೆ. ಮತದಾರರು ಬಿಜೆಪಿಗೆ ನೀಡಿದ ಏಕೈಕ ಜವಾಬ್ದಾರಿ ಕಾನೂನು ಮತ್ತು ಸುವ್ಯವಸ್ಥೆ. ಅದನ್ನು ಅವರು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಕಿಡಿಕಾರಿದರು.
ಗ್ಯಾಂಗ್ ವಾರ್‌ಗಳು, ಸುಲಿಗೆ ಬೆದರಿಕೆಗಳು ಮತ್ತು ಪಾವತಿಸದ ಸಾಲಗಳ ಮೇಲೆ ಗುಂಡು ಹಾರಿಸುವುದನ್ನು ಪ್ರಚಲಿತ ಸಮಸ್ಯೆಗಳೆಂದು ಸೂಚಿಸಿದ್ದರಿಂದ ನಿವಾಸಿಗಳು, ವ್ಯಾಪಾರಿಗಳು, ಮಹಿಳೆಯರು ಮತ್ತು ವೃದ್ಧರು ದೆಹಲಿಯಲ್ಲಿ ನಿರಂತರ ಭಯದಿಂದ ಬದುಕುತ್ತಿದ್ದಾರೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪರಾಧ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಅಮಿತ್ ಶಾ ಅವರ ಜವಾಬ್ದಾರಿಯಾಗಿದೆ. ಆದರೆ ಅವರು ಚುನಾವಣೆಗಳಲ್ಲಿ ನಿರತರಾಗಿದ್ದಾರೆ. ದೆಹಲಿ ದರೋಡೆಕೋರರ ನಿಯಂತ್ರಣದಲ್ಲಿದೆ. ಶೂಟರ್‌ಗಳು ಅವರ ಹಿಂದಿನ ಮಾಸ್ಟರ್ ಮೈಂಡ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.