ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ದುರ್ಬಳಕೆ ತಡೆಯಲು ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಿಸಲು ಚಿಂತನೆ ನಡೆದಿದೆ.
ಕಾರ್ಡ್ ಗೆ 16 ರಿಂದ 17 ರೂಪಾಯಿ ವೆಚ್ಚವಾಗಲಿದ್ದು, ಇದನ್ನು ಯಾರು ಭರಿಸಬೇಕು ಎಂಬುದರ ಜೊತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಪ್ರತಿದಿನ ಸರಾಸರಿ 45 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ನಿರ್ವಾಹಕರ ವಿರುದ್ಧ ಗೋಲ್ಮಾಲ್ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದಾಯ ಸೋರಿಕೆ ತಡೆಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಚಿಂತನೆ ನಡೆದಿದೆ.
ಕೆಲವು ಮಹಿಳೆಯರು ಉಚಿತ ಟಿಕೆಟ್ ಪಡೆಯುವ ಸಂಬಂಧಿಸಿದ ದಾಖಲೆ ತೋರಿಸದೆ ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿಯುವುದು ನಡೆಯುತ್ತಿದ್ದು, ಈ ಗೊಂದಲಗಳಿಗೆ ತೆರೆ ಎಳೆಯಲು ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎನ್ನಲಾಗಿದೆ.
ರಾಜ್ಯದ ಕೆಲವೆಡೆ ಬಸ್‌ನಲ್ಲಿ ಪ್ರಯಾಣ ಮಾಡುವ ಪುರುಷರಿಂದ ಹಣವನ್ನು ಪಡೆದು ಮಹಿಳೆಯರಿಗೆ ನೀಡುವ ಶೂನ್ಯ ದರದ ಟಿಕೆಟ್ ಅನ್ನು ನಿಡಲಾಗುತ್ತಿದೆ.
ತೀರಾ ಗ್ರಾಮೀಣ ಪ್ರದೇಶಗಳಲ್ಲಿ ವೃದ್ಧರು ಹಾಗೂ ಇತರೆ ಅನಕ್ಷರಸ್ಥ ಪುರುಷರು ಹಣ ಕೊಟ್ಟರೂ ಅವರಿಗೆ ಮಹಿಳೆಯರ ಟಿಕೆಟ್ ನೀಡಿ ವಂಚಿಸಲಾಗುತ್ತಿದೆ ಎಂಬ ವರದಿಗಳು ಕಂಡುಬಂದಿವೆ.
ಹೀಗಾಗಿ, ಟಿಕೆಟ್ ಕಳ್ಳಾಟದಿಂದ ಉಂಟಾಗುತ್ತಿರುವ ಕಳ್ಳಾಟ ತಪ್ಪಿಸಲು ಸ್ಮಾರ್ಟ್ ಕಾರ್ಟ್ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ವಿಭಾಗಗಳ ಬಸ್‌ಗಳ ಗ್ರಾಮಾಂತರ ವಲಯಗಳಲ್ಲಿ ಮಹಿಳೆಯರ ಹೆಸರಿನಲ್ಲಿ ಟಿಕೆಟ್ ಕಳ್ಳಾಟ ಮಾಡುತ್ತಿರುವುದರಿಂದ ಬರೋಬ್ಬರು ಮಾಸಿಕ 100 ಕೋಟಿ ರೂ. ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಮಹಿಳೆಯರ ಹೆಸರಿನಲ್ಲಿ ನಡೆಯುತ್ತಿರುವ ಟಿಕೆಟ್ ಕಳ್ಳಾಟವನ್ನು ತಪ್ಪಿಸಲು ಈ ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ.
ಇನ್ನು ಮೇಲೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ತೋರಿಸಿ ಮಹಿಳೆಯರು ಸಂಚಾರ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯ ಫಲಾನುಭವಿಗಳಾದ ಎಲ್ಲ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡುವ ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆ ಮಾಡಲಾಗಿದೆ.
ಪ್ರತಿ ಒಂದು ಸ್ಮಾರ್ಟ್ ಕಾರ್ಡ್ ಮಾಡಿಕೊಡಲು 16 ರಿಂದ 17 ರೂಪಾಯಿ ವೆಚ್ಚವಾಗಲಿದೆ. ಈ ಬಗ್ಗೆ ಕೆಲವು ಕಂಪನಿಗಳಿಂದ ತಾಂತ್ರಿಕ ವರದಿ ಕೇಳಲಾಗಿದೆ.
ಸ್ಮಾರ್ಟ್ ಕಾರ್ಡ್ ನೀಡಲು ಯಾವೆಲ್ಲ ದಾಖಲಾತಿಗಳು ಅಗತ್ಯ, ಸ್ಮಾರ್ಟ್ ಕಾರ್ಡ್ ವ್ಯಾಲಿಡಿಟಿ ಹಾಗೂ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ವೈಪ್ ಮಾಡುವುದಕ್ಕೆ ಕಂಡಕ್ಟರ್‌ಗಳಿಗೆ ಹೊಸ ಮಷಿನ್ ವಿತರಣೆ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಶೀರ್ಘದಲ್ಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.