ಬೆಂಗಳೂರು : ಶಾಲಾ ವಾಹನಗಳ ಪಾನಮತ್ತ ಚಾಲಕರ ಪತ್ತೆಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಕಳೆದ 10 ತಿಂಗಳಲ್ಲಿ 120 ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ ಪಾನಮತ್ತರಾಗಿ ಶಾಲಾ ವಾಹನ ಚಲಾಯಿಸುವವರ ಪತ್ತೆಗಾಗಿ ಬೆಂಗಳೂರು ಸಂಚಾರಿ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಳೆದ 10 ತಿಂಗಳಲ್ಲಿ ಶಾಲಾ ವಾಹನಗಳ 120 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಾನಪತ್ತ ಚಾಲಕ ಚಾಲನಾ ಪರವಾನಗಿ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಸಂಚಾರಿ ಪೊಲೀಸರು ಶಿಫಾರಸು ಮಾಡಿದ್ದಾರೆ. ಆದರೂ ಸಹ ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂಬ ಮಾಹಿತಿ ಅಂಕಿಅಂಶಗಳಿಂದ ತಿಳಿದು ಬಂದಿದೆ.
ಬೆಂಗಳೂರಲ್ಲಿ ಬೆಳಗಿನ ವೇಳೆಯೇ ಕಾರ್ಯಾಚರಣೆಗೆ ಇಳಿಯುವ ಸಂಚಾರಿ ಪೊಲೀಸರು, ಕಳೆದ 10 ತಿಂಗಳ ಅವಧಿಯಲ್ಲಿ ಸರಿಸುಮಾರು 20 ಸಾವಿರ ಶಾಲಾ ವಾಹನಗಳನ್ನು ತಪಾಸಣೆಗೊಳಪಡಿಸಿದ್ದಾರೆ. ಈ ಪೈಕಿ 120 ಚಾಲಕರು ಪಾನಮತ್ತರಾಗಿ ವಾಹನ ಚಲಾಯಿಸಿರುವುದು ಪತ್ತೆಯಾಗಿದೆ
. ಈ ಕುರಿತು ಜನವರಿಯಲ್ಲಿ 16, ಫೆಬ್ರವರಿಯಲ್ಲಿ 7, ಜುಲೈನಲ್ಲಿ 23, ಆಗಸ್ಟ್‌ನಲ್ಲಿ 26, ಸೆಪ್ಟೆಂಬರ್‌ನಲ್ಲಿ 22, ನವೆಂಬರ್‌ನಲ್ಲಿ 24 ಪ್ರಕರಣ ದಾಖಲಾಗಿವೆ. ಈ ಬಗ್ಗೆ ಎಚ್ಚರಿಕೆ ನೀಡಿದರೂ ಸಹ ಪ್ರತಿ ಬಾರಿ ವಿಶೇಷ ಕಾರ್ಯಾಚರಣೆ ಕೈಗೊಂಡಾಗಲೂ ಪಾನಮತ್ತ ಶಾಲಾ ವಾಹನ ಚಾಲಕರು ಸಿಕ್ಕಿ ಬೀಳುತ್ತಿರುವುದು ಮಕ್ಕಳ ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಪಾನಮತ್ತರಾಗಿ ಶಾಲಾ ವಾಹನ ಚಾಲನೆ ಹಾಗೂ ಶಾಲಾ ವಾಹನಗಳಲ್ಲಿ ಹೆಚ್ಚುವರಿಯಾಗಿ ಮಕ್ಕಳನ್ನು ಕರೆದೊಯ್ಯುತ್ತಿರುವುದರ ಕುರಿತು ನಿರಂತರವಾಗಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳಿಗೂ ನೋಟಿಸ್ ನೀಡಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿಯೂ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
“ಕಳೆದ 10 ತಿಂಗಳಿನಿಂದ ನಗರದಲ್ಲಿ ಬೆಳಗಿನ ಸಂದರ್ಭದಲ್ಲಿ ಶಾಲಾ ವಾಹನ ಚಾಲಕರ ತಪಾಸಣೆ ಮಾಡುತ್ತಿದ್ದೇವೆ. ಜನವರಿಂದ ಈವರೆಗೆ 12 ವಿಶೇಷ ಕಾರ್ಯಾಚರಣೆ ನಡೆಸಿ, 20 ಸಾವಿರ ಜನರನ್ನ ತಪಾಸಣೆ ಮಾಡಲಾಗಿದೆ.
120 ಜನ ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿ, ಅವರ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಲಾಗುತ್ತಿದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೂ ಕೂಡ ನೋಟಿಸ್ ನೀಡಲಾಗಿದೆ. ಗುತ್ತಿಗೆ ಆಧಾರದ ಟ್ರಾವೆಲ್ಸ್ ಚಾಲಕರಿಂದ ಹೆಚ್ಚು ನಿಯಮ ಉಲ್ಲಂಘನೆಯಾಗುತ್ತಿದೆ. ಅಂತಹವರ ವಿರುದ್ಧ ಶಾಲಾ ವಾಹನ ಚಾಲನಾ ಪರವಾಗಿ ರದ್ದುಗೊಳಿಸುವ ಕೆಲಸವನ್ನೂ ಮಾಡಲಾಗುತ್ತಿದೆ” ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.