Mysore News:
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಅವರು ಪರಿಸರ ಪ್ರವಾಸೋದ್ಯಮ, ಅದರ ಮಹತ್ವ, ಯೋಜನೆ ಜಾರಿ, ಇದರ ಅನುಕೂಲಗಳು. ಪ್ರವಾಸಿಗರ ನಗರಿ, ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಎಂಬ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಪ್ರವಾಸಿಗರ ನಗರಿ ಮೈಸೂರಿಗೆ ಪ್ರತಿವರ್ಷ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಇಂದಿನ ವಿಶ್ವವಿಖ್ಯಾತ ಅರಮನೆ, ಶತಮಾನ ಪೂರೈಸಿದ ಮೃಗಾಲಯ, ಚಾಮುಂಡಿ ಬೆಟ್ಟ, ಕೃಷ್ಣರಾಜಸಾಗರ ಸೇರಿದಂತೆ ಹಲವು ಪ್ರದೇಶಗಳನ್ನು ಮಾತ್ರ ವೀಕ್ಷಣೆ ಮಾಡಿ ಮೈಸೂರಿನಲ್ಲೇ ಉಳಿಯದೇ ಮಡಿಕೇರಿಯ ಕಡೆ ಹೊರಡುವುದು ಸಾಮಾನ್ಯ.
“ಪ್ರವಾಸಿಗರನ್ನು ಇಲ್ಲೇ ಎರಡು-ಮೂರು ದಿನಗಳ ಕಾಲ ಹಿಡಿದಿಟ್ಟುಕೊಳ್ಳಲು ಪ್ರವಾಸೋದ್ಯಮ ಇಲಾಖೆ ಇಕೋ (ಪರಿಸರ) ಟೂರಿಸಂ ಎಂಬ ಹೊಸ ಯೋಜನೆಯನ್ನು ಪ್ರವಾಸಿಗರಿಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ” ಎಂದು ಎಂ.ಕೆ.ಸವಿತಾ ಹೇಳಿದರು.ಹೀಗಾಗಿ, ಈ ಯೋಜನೆಯ ಮೂಲಕ ಪ್ರವಾಸಿಗರಿಗೆ ಮೈಸೂರಿನಲ್ಲೇ ಹೆಚ್ಚಿನ ಸಮಯ ಪ್ರವಾಸಿ ತಾಣಗಳ ವೀಕ್ಷಣೆ ಜೊತೆಗೆ ಹಲವಾರು ಅಮೂಲ್ಯ ಮಾಹಿತಿಗಳನ್ನು ಪಡೆಯಲು ಸಹಾಯವಾಗುವ ರೀತಿ, ಪರಿಸರ ಪ್ರವಾಸೋದ್ಯಮ ಅಭಿವೃದ್ದಿಗೆ ಚಿಂತನೆ ನಡೆಸಿ ಈ ಬಗ್ಗೆ ಯೋಜನೆಯ ನೀಲನಕ್ಷೆ ತಯಾರಿಸಲಾಗಿದೆ.ಮೈಸೂರು ಮೃಗಾಲಯ, ಕಾರಂಜಿಕೆರೆ ಹಾಗೂ ರೀಜನಲ್ ಹಿಸ್ಟರಿ ಮ್ಯೂಸಿಯಂ ಒಳಗೊಂಡಂತೆ ಮೂರನ್ನೂ ಸೇರಿಸಿ ಇಕೋ ಟೂರಿಸಂಗೆ ಪ್ರವಾಸೋದ್ಯಮ ಇಲಾಖೆ ಯೋಜನೆಯ ಡಿಪಿಆರ್ ಕಳುಹಿಸಿಕೊಟ್ಟಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕೆಲಸಗಳು ಆರಂಭಗೊಳ್ಳಲಿವೆ ಎಂದರು.ಪರಿಸರ ಪ್ರವಾಸೋದ್ಯಮ ಅಂದರೆ ಸ್ಥಳಗಳ ವೀಕ್ಷಣೆ ಮಾಡುವುದು ಅಷ್ಟೇ ಅಲ್ಲ. ಜೊತೆಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಇದರಲ್ಲಿ ಸಾಕಷ್ಟು ವಿಧಗಳಿವೆ.
ಅವುಗಳೆಂದರೆ ಹೆರಿಟೇಜ್ ಟೂರಿಸಂ, ಶೈಕ್ಷಣಿಕ ಟೂರಿಸಂ, ಕೃಷಿ ಟೂರಿಸಂ, ಸಾಂಸ್ಕೃತಿಕ ಟೂರಿಸಂ, ಅಡ್ವೆಂಚರ್ ಟೂರಿಸಂ, ಇಕೋ ಟೂರಿಸಂ, ಮೈಸೂರಿನಲ್ಲಿ ಡಿಫರೆಂಟ್ ಟೈಫ್ ಆಫ್ ಟೂರಿಸಂ ಇದೆ. ಹೆರಿಟೇಜ್ ಟೂರಿಸಂನಲ್ಲಿ ಅರಮನೆ, ದಸರಾ ವೈಭವ ನೋಡಬಹುದು. ರೀಜನಲ್ ಟೂರಿಸಂನಲ್ಲಿ ದೇವಸ್ಥಾನಗಳ ದರ್ಶನ ಮಾಡಬಹುದು. ಚಾಮುಂಡಿ ಬೆಟ್ಟ, ವೇಣುಗೋಪಾಲ ಸ್ವಾಮಿ ಬೆಟ್ಟ, ಸೋಮನಾಥಪುರ ನೋಡಬಹುದು ಎಂದು ತಿಳಿಸಿದರು.
Eco Tourism starts from Zoo:
ಕೇಂದ್ರ ಪುರಸ್ಕೃತ ಯೋಜನೆ ಸ್ವದೇಶಿ ದರ್ಶನ್ 2.0 ಯೋಜನೆ ಅಡಿಯಲ್ಲಿ ಮೈಸೂರು ಆಯ್ಕೆಯಾಗಿದೆ. ಅಂದಾಜು 70 ಕೋಟಿ ಅಂದಾಜು ವೆಚ್ಚ ಇದಕ್ಕಿದೆ. ಈ ಯೋಜನೆ ಅಡಿಯಲ್ಲಿ ಮೃಗಾಲಯಕ್ಕೆ ಬಂದು ಅಲ್ಲಿರುವ ಪ್ರಾಣಿ – ಪಕ್ಷಿ ವೀಕ್ಷಣೆ ಮಾಡಿ, ಕಾರಂಜಿಕೆರೆ ಹೋಗಿ ಅಲ್ಲಿರುವ ವಿವಿಧ ಪ್ರಬೇಧದ ಸಸ್ಯಗಳು, ಗಿಡಗಳು, ಪಕ್ಷಿ ಪ್ರಬೇಧಗಳು, ಚಿಟ್ಟೆಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ತಿಳಿದುಕೊಂಡು, ನಂತರ ರೀಜಿನಲ್ ಹಿಸ್ಟರಿ ಮ್ಯೂಸಿಯಂಗೆ ಹೋಗಿ ಹಳೆಯ ಪಳೆಯುಳಿಕೆಗಳಾದ ಡೈನೋಸಾರಸ್ ಬಗ್ಗೆಯೂ ಕೂಡ ತಿಳಿದುಕೊಳ್ಳಬಹುದಾಗಿದೆ. ಮೈಸೂರು ಮೃಗಾಲಯಕ್ಕೆ ಲಕ್ಷಾಂತರ ಜನ ಬರುತ್ತಾರೆ, ಹೋಗುತ್ತಾರೆ. ಆದರೆ ಪಕ್ಕದಲ್ಲೇ ಇರುವ ಕಾರಂಜಿ ಕೆರೆಗೆ ಬರುವುದು ಕಡಿಮೆ, ಮಾಹಿತಿ ಕೊರತೆಯೂ ಇರಬಹುದು. ವಾಪಾಸ್ ಮೃಗಾಲಯದ ಹತ್ತಿರ ಅವರ ವಾಹನಕ್ಕೆ ಬಂದು ವಾಪಾಸ್ ಹೋಗಬಹುದು ಎಂದು ಹೇಳಿದರು. ಟವರ್ ವಾಚ್ನಲ್ಲಿ ನಿಂತು ನಗರವನ್ನು ನೋಡಬಹುದು. ಇವುಗಳಿಂದ ಪರಿಸರ ಉಳಿಸುವ, ಬೆಳಸುವ ಅರಿವು ಹೆಚ್ಚಾಗಲು ಅನುಕೂಲವಾಗುತ್ತದೆ. ಇವುಗಳ ಚಟುವಟಿಕೆಗಳು ಕಾರಂಜಿ ಕೆರೆಯಲ್ಲಿ ಇರುತ್ತದೆ. ಇದಕ್ಕೆ 24 ಕೋಟಿ ರೂ ಅಂದಾಜು ವೆಚ್ಚವಾಗಬಹುದು ಎಂದು ಮಾಹಿತಿ ನೀಡಿದರು.ಈ ಮೂರನ್ನು ಒಳಗೊಂಡಂತೆ ಪ್ರವಾಸಿಗರನ್ನು ಸೆಳೆಯಲು ಇಕೋ ಟೂರಿಸಂ ಡಿಪಿಆರ್ ಕಳುಹಿಸಿಕೊಡಲಾಗಿದೆ. ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ. ಇದರಲ್ಲಿ ಕೆನಾಪಿ ವಾಕ್ ಮಾಡುವುದರಿಂದ ಸಾಕಷ್ಟು ಮರ ಪ್ರಬೇಧಗಳ ಬಗ್ಗೆ ತಿಳಿಯಬಹುದು. ಜಿಪ್ ಲೈನ್ ಚಟುವಟಿಕೆಗಳು ಮಾಡಬಹುದು.
Tong Ride:
ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಪ್ರಸಾದ್ ಸ್ಕೀಂ ಅಡಿಯಲ್ಲಿ ಸೇರಿಸಲಾಗಿದೆ. ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. 47 ಕೋಟಿ ರೂ ಅಂದಾಜು ವೆಚ್ಚ ಡಿಪಿಆರ್ ಸಲ್ಲಿಸಲಾಗಿದೆ. ಚಾಮುಂಡಿ ಬೆಟ್ಟದ ಮೂಲ ಆಚರಣೆಗೆ ಧಕ್ಕೆಯಾಗದಂತೆ ಭಕ್ತಾಧಿಗಳಿಗೆ ಉತ್ತಮ ಸೌಲಭ್ಯಗಳ ಜತೆ ತಾಯಿ ದರ್ಶನ ಮಾಡುವುದಕ್ಕೆ ಅನುಕೂಲ ಮಾಡಿಕೊಡುವುದು ಸೇರಿದಂತೆ ಭಕ್ತರಿಗೆ ಸುಖಕರ ದರ್ಶನ, ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸರ್ಕಾರದ ಅನುದಾನವನ್ನು ಕಾಯದೇ ಇಲ್ಲಿನ ಸ್ಥಳೀಯ ಹೋಟೆಲ್, ಟೂರ್ ಆ್ಯಂಡ್ ಟ್ರಾವೆಲ್ಸ್, ಏಜೆನ್ಸಿಗಳೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಬಸ್, ಬೈಕ್, ಕಾರ್ ಬಿಟ್ಟು ನಗರವನ್ನು ಒಂದು ಸುತ್ತು ಹಾಕಿ ಬರಲು ಈ ಯೋಜನೆಯಲ್ಲಿ ಟಾಂಗ್ ರೈಡ್ ಸೇರಿಸಲಾಗಿದೆ. ಇಷ್ಟೆಲ್ಲ ಚಟುವಟಿಕೆಗಳಿಕೆ ಒಂದು ದಿನ ಸಾಕಾಗುವುದಿಲ್ಲ, ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.