ಹುಬ್ಬಳ್ಳಿ : ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಹಣ ಹಾಕಿ ಸರಕಾರಿ ಶಾಲೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾಣಿಜ್ಯ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದ ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ಇದೀಗ ಇಡೀ ಹುಬ್ಬಳ್ಳಿಗೆ ಮಾದರಿಯಾಗಿ ಹೊರಹೊಮ್ಮಿದೆ.
ಹಳೆ ವಿದ್ಯಾರ್ಥಿಗಳ ಸಂಘ 15 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶಾಲೆ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಯೋಜನೆ ರೂಪಿಸಿದೆ.
ಸೋರುತ್ತಿದ್ದ 14 ಕೊಠಡಿಗಳ ಚಾವಣಿಗೆ ರಬ್ಬರ್ ಪೇಂಟ್, ಪೈಪ್‌ಲೈನ್ ದುರಸ್ತಿ, ಆವರಣಕ್ಕೆ ತಂತಿ ಬೇಲಿ, ಶಾಲೆ ಹೊರಾಂಗಣ ಮತ್ತು ಒಳಾಂಗಣಕ್ಕೆ ಪೇಂಟಿಂಗ್ ಮಾಡಿದ್ದಾರೆ. ಆಕರ್ಷಕ ಗೋಡೆ ಬರಹ, ಚಿತ್ತಾರಗಳನ್ನು ಬಿಡಿಸಲಾಗಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಹೆಚ್ಚುವರಿ ವಿದ್ಯಾರ್ಥಿಗಳು ಸೇರಿದ್ದಾರೆ.
ಮಾರುಕಟ್ಟೆ ಪ್ರದೇಶದಲ್ಲಿದ್ದ ಬ್ರಾಡ್‌ವೇ ರಸ್ತೆಯ ಈ ಶಾಲೆ ಶಿಥಿಲಾವಸ್ಥೆ ತಲುಪಿದ್ದರಿಂದ ಪಾಲಿಕೆಯ ಯೋಜನಾ ವಿಭಾಗ ಇದನ್ನು ಕೆಡವಿ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಿಸಲು ಯೋಜನೆ ರೂಪಿಸಿತ್ತು.
ಇದರಿಂದ ಎಚ್ಚೆತ್ತ ಹಳೆ ವಿದ್ಯಾರ್ಥಿಗಳು ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಅಭಿವೃದ್ಧಿಪಡಿಸಿದ್ದಾರೆ. ಇದರೊಂದಿಗೆ ಸರ್ಕಾರದ ‘ನಮ್ಮ ಶಾಲೆ ನಮ್ಮ ಹೊಣೆ’ ಎಂಬ ಧ್ಯೇಯವನ್ನು ಸಾಕಾರಗೊಳಿಸಿದ್ದಾರೆ.
1868ರಲ್ಲಿ ಆರಂಭವಾದ ಈ ಶಾಲೆಯಲ್ಲಿ LKG ಜೊತೆಗೆ 1ರಿಂದ 7ನೇ ತರಗತಿಗಳಿವೆ. 6 ಜನ ಶಿಕ್ಷಕರಿದ್ದಾರೆ. ಹೀಗಾಗಿ ಗುತ್ತಿಗೆ ಆಧಾರದ ಮೇಲೆ ಯೋಜನೆ ಗಣಿತ, ವಿಜ್ಞಾನ, ಹಿಂದಿ ಶಿಕ್ಷಕರನ್ನು ನೇಮಕ ಮಾಡಲು ಹಳೆ ವಿದ್ಯಾ ರ್ಥಿಗಳ ಸಂಘ ಯೋಜಿಸಿದೆ.
ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಪ್ರಯೋಗಾಲಯ, ನೀರು, ವಿದ್ಯುತ್ ಇತ್ಯಾದಿ ಸೌಲಭ್ಯಕ್ಕೆ ಯೋಜನೆ ರೂಪಿಸಲಾಗಿದೆ.
ಇದೇ ಶಾಲೆಯಲ್ಲಿ ಕಲಿತಿರುವ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಈ ಶಾಲೆಯ ಹಳೆ ವಿದ್ಯಾರ್ಥಿಗಳು. ಹಾಗಾಗಿ, ಅವರೂ ಕೂಡಾ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
“ಖಾಸಗಿ ಶಾಲೆಗೇನೂ ಕಮ್ಮಿ ಇಲ್ಲದಂತೆ ನಾವು ಕಲಿತ ಶಾಲೆಯನ್ನು ಅಭಿವೃದ್ಧಿಗೊಳಿಸಲು ಯೋಜನೆ ಹಾಕಿಕೊಂಡಿದ್ದೇವೆ. ಈಗಾಗಲೇ 5.33 ಲಕ್ಷ ರೂ. ವೆಚ್ಚದಲ್ಲಿ ಹಲವು ಕೆಲಸಗಳನ್ನು ಮಾಡಲಾಗಿದೆ. ಇನ್ನುಳಿದ ಕಾರ್ಯ ಪೂರ್ಣಗೊಳಿಸಲು ವಿದ್ಯಾರ್ಥಿಗಳ ಸಂಘ ಅಗತ್ಯ ಯೋಜನೆ ರೂಪಿಸಿದೆ” ಎಂದರು.
“ಇಲ್ಲಿಯವರೆಗೂ ಸರ್ಕಾರದಿಂದ ಪೈಸೆ ಹಣಕಾಸು ನೆರವು ಪಡೆದುಕೊಂಡಿಲ್ಲ. ಹಳೆ ವಿದ್ಯಾರ್ಥಿಗಳು ಮಾಡಿದ ಧನಸಹಾಯದಿಂದ ಖಾಸಗಿ ಶಾಲೆಗಳ ಹಾವಳಿ ತಪ್ಪಿಸುವುದರ ಜೊತೆಗೆ ಕನ್ನಡ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಣ ತೊಟ್ಟಿದ್ದೇವೆ.
ಶಿಕ್ಷಕರ ಕೊರತೆ ನಡುವೆಯೂ LKG, UKG ಪ್ರಾರಂಭಿಸಿದ್ದೇವೆ” ಎಂದು ಹಳೆ ವಿದ್ಯಾರ್ಥಿ ಪರಶುರಾಮ್ ವಾಲೀಕಾರ ಹೇಳಿದರು.
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಗೌಡ ಪ್ರತಿಕ್ರಿಯಿಸಿ, “ಈ ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಳೆ ವಿದ್ಯಾರ್ಥಿಗಳು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ.
ಕಳೆದ ವರ್ಷ ಮಹಾನಗರ ಪಾಲಿಕೆ ಶಾಲೆ ಕಟ್ಟಡದ ಜಾಗದಲ್ಲಿ ಮಲ್ಟಿ ಲೆವಲ್ ಪಾರ್ಕಿಂಗ್ಗೆ ಯೋಜನೆ ಮಾಡಿತ್ತು. ಇದಕ್ಕೆ ಹಳೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಸದ್ಯಕ್ಕೆ ಕೈಬಿಟ್ಟಿದ್ದು, ಈಗ ಯಾವುದೇ ಪ್ರಸ್ತಾವನೆ ಶಿಕ್ಷಣ ಇಲಾಖೆ ಮುಂದೆ ಬಂದಿಲ್ಲ” ಎಂದರು.