ದಾವಣಗೆರೆ: ಶಾಲಾ ಕಟ್ಟಡದ ಕಾಮಗಾರಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿರುವ ಕಾರಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಟ್ಟಟ ಕಾಮಗಾರಿ ನಿಲ್ಲಿಸಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಹಳೆ ದಾವಣಗೆರೆ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ತೆರೆದಿದ್ದ ಮೌಲಾನಾ ಆಜಾದ್ ಮಾದರಿ ಶಾಲೆಯ ಕಟ್ಟಡ ತಲೆ ಎತ್ತುವ ಮುನ್ನವೇ ಕಾಮಗಾರಿ ಅಪೂರ್ಣವಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು ಕಿಟಕಿ, ಬಾಗಿಲು, ಶೌಚಾಲಯ ಕಟ್ಟಲಾಗಿದೆ.
ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿ ಇದ್ದು ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪಿಯುಸಿ ಕೂಡ ತೆರೆಯಲಾಗುತ್ತಿದೆ. ಸದ್ಯ 300ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಲ್ಪಸಂಖ್ಯಾತರೇ ಹೆಚ್ಚಿರುವ ಈ ಪ್ರದೇಶದಲ್ಲಿ ಈ ಶಾಲೆ ಶಿಕ್ಷಣ ಪಡೆಯಲು ವರದಾನವಾಗಿತ್ತು.
“ಶಾಲಾ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡದ ಸಮಸ್ಯೆ ದೂರ ಮಾಡಿ ಸ್ವಾಮಿ” ಎಂದು ಶಾಲೆಯ ಹೊರಭಾಗದಲ್ಲಿ ಆಪ್ ಹೋರಾಟ ಮಾಡುತ್ತಿದೆ. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಮಣಿದು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿ ಮುಂದುವರೆಸುವ ಭರವಸೆ ನೀಡಿದ್ದಾರೆ.
“ಶಾಲಾ ಕಟ್ಟಡ ಕಾಮಗಾರಿಗೆ ಎರಡು ಕೋಟಿ ಇಪ್ಪತ್ತು ಲಕ್ಷ ರೂ ಅನುದಾನವಿದೆ. ನಿರ್ಮಾಣ ಹಂತದ ಕಟ್ಟಡಕ್ಕೆ 90 ಲಕ್ಷ ವ್ಯಯಿಸಲಾಗಿದೆ. ಒಂದು ಕೋಟಿ ಮೂವತ್ತು ಲಕ್ಷದ ಕಾಮಗಾರಿ ಬಾಕಿ ಇದೆ. ಈ ಬಗ್ಗೆ ಕೆಲವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತನಿಖೆಯ ಕಾರಣ ಕಾಮಗಾರಿ ನಿಲ್ಲಿಸಲಾಗಿದೆ” ಎಂದರು.
“ಶಾಲಾ ಕಟ್ಟಡ ನಿರ್ಮಾಣವನ್ನು ಕೆ.ಆರ್.ಡಿ.ಐ.ಎಲ್‌ಗೆ ನೀಡಲಾಗಿತ್ತು. 97 ಲಕ್ಷ ರೂ ಅನುದಾನದಲ್ಲಿ ಕಾಮಗಾರಿ ನಡೆದಿದೆ. ಕಟ್ಟಡವೂ ತಲೆ ಎತ್ತಿದೆ. ಅದರೆ ಕಾಮಗಾರಿ ಕುರಿತು ಲೋಕಾಯುಕ್ತದಲ್ಲಿ ಪ್ರಕರಣವಿರುವ ಕಾರಣ ಕೆಲಸ ನಿಲ್ಲಿಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಗಮನಕ್ಕೆ ಬಂದ ಬೆನ್ನಲ್ಲೇ ಸಭೆ ಮಾಡಿದ್ದರು. ಲೋಕಾಯುಕ್ತ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಮಾಡಿ ಅವರ ನಿರ್ದೇಶನ ಪಡೆದು, ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿ ಕಟ್ಟಡ ಮುಗಿಸುತ್ತೇವೆ” ಎಂದು ಭರವಸೆ ನೀಡಿದರು.