Belgaum News:
ಸಗಣಿ, ಎರೆ ಹುಳು – ಹಸಿರು ಎಲೆಯಂತಹ ಸಾವಯವ ಗೊಬ್ಬರ ಬಳಸಿ ದೇಶಿ ತಳಿಯ 18 ಬಗೆಯ ಜೋಳ ಬೆಳೆದ ರೈತನ ಬಗ್ಗೆ ನಮ್ಮ ಪ್ರತಿನಿಧಿ ಸಿದ್ದನಗೌಡ ಪಾಟೀಲ್ ಬರೆದಿರುವ ವಿಶೇಷ ವರದಿ ಇಲ್ಲಿದೆ. ಹೌದು, ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಅವರೇ ಹಲವು ಬಗೆಯ ಜವಾರಿ ಜೋಳ ಬೆಳೆದು ಎಲ್ಲರನ್ನೂ ಬೆರಗುಗೊಳಿಸಿದವರು.
FARMER SUCCESS STORYಸಾಮಾನ್ಯವಾಗಿ ರೈತರು ಒಂದೇ ತಳಿಯ ಬೆಳೆ ಬೆಳೆಯುತ್ತಾರೆ. ಆದರೆ, ಕಲ್ಲಪ್ಪ ಅವರು ಮಾತ್ರ ಕಳೆದ ಹಲವು ವರ್ಷಗಳಿಂದ 18ಕ್ಕೂ ಅಧಿಕ ತರಹದ ಜೋಳ ಬೆಳೆದು, ದೇಶಿ ಬೀಜ ಸಂರಕ್ಷಿಸಿ, ಜೋಳದ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದು ಹೈಬ್ರಿಡ್ ಯುಗ. ದೇಶಿ ತಳಿಗಳು ಕಣ್ಮರೆ ಆಗುತ್ತಿರುವ ಕಾಲಘಟ್ಟ. ರಾಸಾಯನಿಕ ಪದ್ಧತಿಯಿಂದ ಬೆಳೆದ ವಿಷಾಹಾರವನ್ನೇ ಎಲ್ಲರೂ ಸೇವಿಸಬೇಕಿದೆ.
ಪರಿಣಾಮ ಅನೇಕ ರೋಗ – ರುಜಿನಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಇಂಥ ವಿಷಮ ಸ್ಥಿತಿಯಲ್ಲಿ ಇಲ್ಲೊಬ್ಬ ರೈತ ದೇಶಿ ಬೀಜಗಳ ಸಂರಕ್ಷಣೆಗೆ ಪಣ ತೊಟ್ಟಿದ್ದು, ಸುಮಾರು 18 ತಳಿಯ ದೇಶಿ ಜೋಳ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇದು ಪಕ್ಕಾ ದೇಶಿ ಜವಾರಿ ಜೋಳ ಬೆಳೆದು ಯಶಸ್ವಿಯಾಗಿರುವ ಮಾದರಿ ಕೃಷಿ ಋಷಿಯ ವಿಶೇಷ ವರದಿ.”ಭೂಮಿ ತಾಯಿ ಒಡಲಲ್ಲಿ ವಿಷ ಬಿತ್ತಿದರೆ, ಆಕೆ ತನ್ನ ಮಕ್ಕಳಿಗೆ ವಿಷವನ್ನೇ ಕೊಡುತ್ತಾಳೆ. ಹೈಬ್ರಿಡ್ ಆಹಾರ ಸೇವನೆಯಿಂದ ತಾಯಿ ಗರ್ಭದಲ್ಲೇ ಮಗುವಿಗೆ ನಾನಾ ರೀತಿಯ ರೋಗಗಳು ತಗುಲುತ್ತಿವೆ. ಹುಟ್ಟುವ ಮಕ್ಕಳು ಸದೃಢವಿಲ್ಲ. ಇದು ಅತ್ಯಂತ ಕಳವಳಕಾರಿ ಸಂಗತಿ. ನಮ್ಮ ತಂದೆಯವರು ಜವಾರಿ ಆಹಾರ ಪ್ರಿಯರು. ಆರಂಭದಲ್ಲಿ ನಾಲ್ಕೈದು ಜೋಳದ ತಳಿಗಳು ನಮ್ಮಲ್ಲಿದ್ದವು. ಆಮೇಲೆ ದೇಶಿ ತಳಿಗಳು ಇರುವಲ್ಲಿ ಹೋಗಿ ಬೀಜ ಸಂಗ್ರಹಿಸಲು ಶುರು ಮಾಡಿದೆ. ಅವುಗಳ ಸಂಖ್ಯೆ 24ಕ್ಕೆ ಏರಿತ್ತು. ಸದ್ಯ 18 ಬಗೆಯ ಜವಾರಿ ಜೋಳ ಬೆಳೆದಿದ್ದೇನೆ. ಎಲ್ಲೇ ದೇಶಿ ತಳಿ ಇದ್ದರೂ ಅಲ್ಲಿಗೆ ಹೋಗಿ ಸಂಗ್ರಹಿಸುತ್ತೇನೆ” ಎನ್ನುತ್ತಾರೆ ರೈತ ಕಲ್ಲಪ್ಪ ನೇಗಿನಹಾಳ.
Types of Corn:
ಕಣಮುಚಕ ಅಳ್ಳಿನ ಜೋಳ, ಕಾಗಿಮೂತಿ ಅಳ್ಳಿನಜೋಳ, ಪಿಂಜರ ಅಳ್ಳಿನಜೋಳ, ಮಲ್ಲೂರಿ, ಸಕ್ರಿಮುಕ್ರಿ, ಕೆಂಪುಕಡಬಿನ ಜೋಳ, ಲೋಕುರಿ ಜೋಳ, ಶೇಡಬಾಳ ಜೋಳ, ಶೇಡಂ ಜೋಳ, ಮುತ್ತಿನ ಜೋಳ, ದೋಸೆಜೋಳ, ಪುಲೆಶೋಧಾ ಜೋಳ, ಮಲ್ಲೂರಿ ಜೋಳ, ಕಾರಜೋಳ, ಹಾಲಿಮರ್ಡಿ ಜೋಳ, ಲೋಕಲ್ ಬಾರ್ಸಿ ಜೋಳ, ಎಣೆಗಾರ ಜೋಳ, ಗಟ್ಟಿತೆನಿ, ಮಾಲದಂಡಿ ಜೋಳ ಸೇರಿ 18 ಬಗೆಯ ಜೋಳವನ್ನು ರೈತ ಕಲ್ಲಪ್ಪ ನೇಗಿನಹಾಳ ಸಮೃದ್ಧವಾಗಿ ಬೆಳೆದಿದ್ದಾರೆ.
Zero Capital, Organic Farming:
ಕಲ್ಲಪ್ಪ ಅವರಿಗೆ ಒಟ್ಟು 10 ಎಕರೆ ಜಮೀನಿದ್ದು, ಅದರಲ್ಲಿ 5 ಎಕರೆಯಲ್ಲಿ ಜೋಳ ಬೆಳೆದಿದ್ದಾರೆ. ಇನ್ನುಳಿದ 5 ಎಕರೆಯಲ್ಲಿ ಟೊಮೆಟೋ, ಸೌತಿಕಾಯಿ ಸೇರಿ ಮತ್ತಿತರ ತರಕಾರಿ ಬೆಳೆ ಬೆಳೆಯುತ್ತಾರೆ. ಜೊತೆಗೆ ಕರಿಕಡ್ಲಿ, ಅಲಸಂದಿ, ಗೋಧಿ, ಸದಕ, ಸಿರಿಧಾನ್ಯಗಳಾದ ನವಣೆ, ಬರ್ಗ, ರಾಗಿ, ಸಜ್ಜೆಯನ್ನೂ ಬೆಳೆಯುತ್ತಾರೆ. “ಹೊಲದಲ್ಲಿ ಕುರಿಗಳನ್ನು ಮಲಗಿಸುತ್ತೇನೆ. ಅಲ್ಲದೇ ಸಗಣಿ ಗೊಬ್ಬರ, ಎರೆಹುಳು-ಹಸಿರು ಎಲೆ ಗೊಬ್ಬರ ಬಳಸುತ್ತೇನೆ. ರಾಸಾಯನಿಕ ಕ್ರಿಮಿನಾಶಕ ಬದಲು ಮನೆಯಲ್ಲೇ ತಯಾರಿಸಿದ ದಶಪರ್ಣಿಯನ್ನು ಬಳಸುತ್ತೇನೆ. ನನ್ನದು ಶೂನ್ಯ ಬಂಡವಾಳ, ಸಂಪೂರ್ಣ ಸಾವಯವ ಕೃಷಿ. ಇದು ನಮಗೆ ನೆಮ್ಮದಿ ಮತ್ತು ಆರೋಗ್ಯವನ್ನೂ ಕೊಟ್ಟಿದೆ. ಜೋಳದಿಂದ ಹೆಚ್ಚು ಆದಾಯ ಬರಲ್ಲ. ಆದರೆ, ದೇಶಿ ತಳಿ ಉಳಿಬೇಕು ಎಂಬ ಏಕೈಕ ಉದ್ದೇಶದಿಂದ ಜೋಳ ಬೆಳೆಯುತ್ತಿದ್ದೇನೆ” ಎಂಬುದು ಕಲ್ಲಪ್ಪ ಅವರ ಅಭಿಪ್ರಾಯ.
“ಇಂದು ಬಹುತೇಕ ರೈತರು ರಾಸಾಯನಿಕ ಕೃಷಿಯನ್ನೆ ನೆಚ್ಚಿಕೊಂಡಿದ್ದಾರೆ. ಇಂಥ ಆಹಾರ ಸೇವನೆಯಿಂದ ನೂರೆಂಟು ರೋಗಗಳು ಉತ್ಪತ್ತಿಯಾಗುತ್ತಿವೆ. ಅಲ್ಲದೇ ಹೆಚ್ಚಿನ ಖರ್ಚಾಗಿ ಸಾಲದ ಕೂಪದಲ್ಲಿ ರೈತ ಮುಳುಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಪ್ರತಿಯೊಂದು ದೇಶಿ ಜೋಳಗಳಲ್ಲೂ ತನ್ನದೇಯಾದ ಔಷಧ ಗುಣಗಳಿವೆ. ಕೆಂಪು ಜೋಳದಿಂದ ಕಡಬು, ದೋಸೆ, ಸಂಗಟಿ ಮಾಡಬಹುದು. ಶುಗರ್ ಇದ್ದವರಿಗೆ ಇದು ರಾಮಬಾಣ. ಇನ್ನು ಸಕ್ಕರಿಮುಕ್ಕಿ ಜೋಳಕ್ಕೆ ಶೀತ ತಡಿಯೋ ಶಕ್ತಿ ಇದೆ.
ಕೋಡಮುರಕ ಜೋಳ ಬಾರ್ಸಿ ಜೋಳ ರೊಟ್ಟಿಗೆ ಹೇಳಿ ಮಾಡಿಸಿದ ತಳಿ. ಮಾಲದಂಡಿ ಜೋಳ ಕಪ್ಪುಮಣ್ಣಿಗೆ ಉತ್ತಮ ಫಸಲು ಕೊಡುತ್ತದೆ. ಇದರ ಮೇವು ದನಗಳಿಗೆ ಬಹಳ ಇಷ್ಟ. ಗಟ್ಟಿದನಿ ಜೋಳ ಬರನಿರೋಧಕ ಗುಣ ಹೊಂದಿವೆ. ಈ ಜೋಳ ತಿನ್ನುವುದರಿಂದ ನಮಗೆ ಯಾವುದೇ ರೋಗ ರುಜಿನ ಬರುವುದಿಲ್ಲ. ಜೋಳ ತಿಂದವ ತೋಳದಂತೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆದ್ದರಿಂದ ಎಲ್ಲ ರೈತರು ಸಾವಯವ ಕೃಷಿ ಕಡೆ ಮುಖ ಮಾಡಿ, ದೇಶಿ ತಳಿಗಳನ್ನು ಉಳಿಸಿ, ಬೆಳೆಸಬೇಕು. ಇದರಿಂದ ರಾಸಾಯನಿಕ ಮುಕ್ತ, ಸದೃಢ ಆರೋಗ್ಯಯುಕ್ತ ಸಮಾಜ ನಿರ್ಮಿಸಬಹುದು” ಎನ್ನುತ್ತಾರೆ ಕಲ್ಲಪ್ಪ ನೇಗಿನಹಾಳ.
75-80 quintal of maize every year:
ಮೊದಲು ರಾಸಾಯನಿಕ ಕೃಷಿ ಪದ್ಧತಿಯಿಂದ ಸಾಲಗಾರನಾಗಿದ್ದ ಕಲ್ಲಪ್ಪ ಇಂದು ಎಲ್ಲ ಬೆಳೆ ಸೇರಿ ಪ್ರತಿ ವರ್ಷ 4.5 ಲಕ್ಷ ಆದಾಯ ಗಳಿಸುತ್ತಿದ್ದಾರೆ. 75 – 80 ಕ್ವಿಂಟಾಲ್ ಜವಾರಿ ಜೋಳ ಬೆಳೆಯುವ ಕಲ್ಲಪ್ಪ ಅವರ ಬಳಿ ಜೋಳ ಖರೀದಿಸಲು ಜನ ಮುಗಿ ಬೀಳುತ್ತಾರೆ. ಯರಗಟ್ಟಿ, ಲೋಕಾಪುರ, ಚಡಚಣ, ಹಾವೇರಿ, ದಾವಣಗೆರೆ, ಕುಂದಗೋಳ, ರಾಯಚೂರ, ಜೇವರ್ಗಿ ಸೇರಿ ವಿವಿಧೆಡೆ ರೈತರು ಕಲ್ಲಪ್ಪ ಅವರ ಮನೆಗೆ ಬಂದು ಬೀಜಗಳನ್ನು ಒಯ್ದು, ಉತ್ತಮ ಫಸಲು ತೆಗೆಯತ್ತಿದ್ದಾರೆ. “ಬೆಂಗಳೂರು, ಕಲಬುರ್ಗಿ, ದಾವಣಗೆರೆ ಸೇರಿ ಮತ್ತಿತರ ಕಡೆಯವರು ಫೋನ್ ಮೂಲಕ ಆರ್ಡರ್ ಮಾಡುತ್ತಾರೆ. ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಅವರಿಗೆ ಬೇಕಾದಷ್ಟು ಜೋಳ ಕಳಿಸಿ ಕೊಡುತ್ತೇನೆ. 25 ಕೆಜಿ ಪ್ಯಾಕೇಟ್ ಮಾಡಿದ್ದೇವೆ. ಇನ್ನು ಬೀಜಕ್ಕಾಗಿ 1, 2 ಕೆಜಿ ಪ್ಯಾಕ್ ಮಾಡಿ ಕೊಡುತ್ತೇನೆ” ಎಂದರು.
ಧಾರವಾಡ ಕೃಷಿ ಮೇಳ ಸೇರಿ ಎಲ್ಲಿಯೇ ಮೇಳಗಳು ನಡೆದರೂ ಅಲ್ಲಿ ಕಲ್ಲಪ್ಪ ಹಾಜರಿರುತ್ತಾರೆ. ಜೋಳದ ಬೀಜ ಮಾರಾಟ ಮಾರುತ್ತಾರೆ. ಆಸಕ್ತ ರೈತರಿಗೆ ಜೋಳ ಬೆಳೆಯುವ ವಿಧಾನ ತಿಳಿಸಿಕೊಡುತ್ತಾರೆ. 3ನೇ ತರಗತಿವರೆಗೆ ಮಾತ್ರ ಓದಿರುವ ಕಲ್ಲಪ್ಪ ರೈತರು ಮತ್ತು ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಪಾಠ ಮಾಡುತ್ತಾರೆ. ಇವರ ಈ ಕೃಷಿ ಸಾಧನೆಗೆ 2013-14ನೇ ಸಾಲಿನ ಕೃಷಿ ಪಂಡಿತ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿ ಗೌರವಿಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಋಷಿ, ಆರ್ಟ್ ಆಫ್ ಲಿವಿಂಗ್ ಕೃಷಿ ರತ್ನ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೀಜ ಸಂರಕ್ಷಕ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
Wife-Son Great Strength:
ರೈತ ಶಿವನಗೌಡ ಪಾಟೀಲ್ ಮಾತನಾಡಿ, “ಕಲ್ಲಪ್ಪ ನಮ್ಮೂರಿಗೆ ಅಷ್ಟೇ ಅಲ್ಲದೇ ಸುತ್ತಲಿನ 20 ಹಳ್ಳಿಗಳಿಗೆ ಹೆಮ್ಮೆ. ಇವರಿಂದ ಪ್ರೇರಿತರಾಗಿ ನಾವು ಕೂಡ ಸಾವಯವ ಪದ್ಧತಿ ರೂಢಿಸಿಕೊಂಡಿದ್ದೇವೆ. ಖರ್ಚು ಕಮ್ಮಿ ಮತ್ತು ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಹಾಗಾಗಿ, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ. ಆದ್ದರಿಂದ ಎಲ್ಲ ರೈತರು ಸಾವಯವ ಕೃಷಿ ಕಡೆ ಮನಸ್ಸು ಮಾಡಬೇಕು” ಎಂದರು.
ಕಲ್ಲಪ್ಪ ಅವರಿಗೆ ಪತ್ನಿ ಸಾವಿತ್ರಿ ಮತ್ತು ಪುತ್ರ ಗೋಪಾಲ್ ದೊಡ್ಡ ಶಕ್ತಿಯಾಗಿದ್ದಾರೆ. ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಪದವಿ ಮುಗಿಸಿದರೂ ಮಗನನ್ನು ನೌಕರಿಗೆ ಕಳುಹಿಸದೇ ಕೃಷಿಯನ್ನೇ ಮಾಡಿಸುತ್ತಿರುವುದು ವಿಶೇಷ. “ಸಾವಯವ ಕೃಷಿಯಲ್ಲಿ ನಮಗೆ ಖುಷಿ ಇದೆ. ಬೇರೆ ಬೇರೆ ಕಡೆಯಿಂದ ಬರುವ ರೈತರು ಸಂಜೆವರೆಗೂ ಸಮಾಧಾನದಿಂದ ಕುಳಿತು ಜೋಳದ ಬಗ್ಗೆ ತಿಳಿದುಕೊಳ್ಳುತ್ತಾರೆ. ಕೊಯ್ಲು ಮಾಡಿದ ಬಳಿಕ ಜೋಳವನ್ನು ಬೇರೆ ಬೇರೆಯಾಗಿ ಹೊಂದಿಸಿ ಇಡುವುದು ತುಂಬಾ ಕಷ್ಟ. ಇನ್ನು ನಮ್ಮ ಯಜಮಾನರು ಹೊರಗಡೆ ಹೋದಾಗ ನಾನೇ ಜೋಳ ಕೊಡುತ್ತೇನೆ” ಎಂದು ಕಲ್ಲಪ್ಪ ಪತ್ನಿ ಸಾವಿತ್ರಿ ನೇಗಿನಹಾಳ ಹೇಳಿದರು.
ಸಾವಯವ ಕೃಷಿ ಮೂಲಕ ಹೊಸ ಪ್ರಯೋಗ ಮತ್ತು ದೇಶಿ ಬೀಜ ಉಳಿಸಲು ಮುಂದಾಗುವ ರೈತರಿಗೆ ಕಲ್ಲಪ್ಪ ಅವರು ಪ್ರೋತ್ಸಾಹಿಸುತ್ತಿದ್ದಾರೆ. ನಿಮಗೆ ಏನಾದರೂ ಮಾಹಿತಿ ಬೇಕಿದ್ದರೆ ಅವರ ಮೊ.ನಂ. 9980634062 ಸಂಪರ್ಕಿಸಬಹುದು.
ಇದನ್ನು ಓದಿರಿ : CUCUMBER CARROT PANCAKES : ಭರ್ಜರಿ ರುಚಿಯ ಸೌತೆಕಾಯಿ – ಗಜ್ಜರಿ ಪ್ಯಾನ್ ಕೇಕ್ಸ್ ಸಿದ್ಧಪಡಿಸೋದು ಹೇಗೆ ಗೊತ್ತಾ