ಹೈದರಾಬಾದ್: ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್ ತನ್ನ Vida V2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗಿರುವ ವಿಡಾ ವಿ1 ಸರಣಿಯ ಮುಂದುವರೆದ ಆವೃತ್ತಿ ಇದಾಗಿದ್ದು, 96,000 ರೂ. ಆರಂಭಿಕ ಬೆಲೆ ಇದೆ.
V2 ಲೈಟ್ ರೂಪಾಂತರದಲ್ಲಿ ಪ್ರಸ್ತುತ 2.2kWhನೊಂದಿಗೆ ಬರುತ್ತಿದೆ. ಮತ್ತೊಂದೆಡೆ, V2 ಪ್ಲಸ್ ಮತ್ತು V2 Pro ನಲ್ಲಿನ 3.44kWh ಮತ್ತು 3.94kWh ಬ್ಯಾಟರಿ ಪ್ಯಾಕ್‌ಗಳು ಅದರ ಹಿಂದಿನ V1 ಪ್ಲಸ್ ಮತ್ತು V1 ಪ್ರೊನಂತಿವೆ ಎಂದು ಕಂಪನಿ ತಿಳಿಸಿದೆ.
ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ, ಟಿವಿಎಸ್ ಮೋಟಾರ್ ಮತ್ತು ಬಜಾಜ್ ಆಟೋ ಕಂಪನಿಗಳ ಇ-ಸ್ಕೂಟರ್‌ಗಳಿಗೆ ಪ್ರಬಲ ಸ್ಪರ್ಧೆಯೊಡ್ಡಲು ಹೀರೋ ಮೋಟೊಕಾರ್ಪ್ ಹೊಚ್ಚ ಹೊಸ ವಿಡಾ ವಿ2 (Vida V2) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.
‘ವಿಡಾ ವಿ2’ ಎಲೆಕ್ಟ್ರಿಕ್ ಸ್ಕೂಟರ್ಗಳು ವಿಡಾ ವಿ2 ಲೈಟ್ (V2 Lite), ವಿಡಾ ವಿ2 ಪ್ಲಸ್ (V2 Plus) ಹಾಗೂ ವಿಡಾ ವಿ2 ಪ್ರೊ (V2 Pro) ಎಂಬ ಮೂರು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಲಭ್ಯ. ವಿಡಾ ವಿ2 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ರೂ.96,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ ಎಂದು ಕಂಪನಿ ಹೇಳಿದೆ.
2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಇದರಲ್ಲಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದಲ್ಲಿ ಸುಮಾರು 94 ಕಿಲೋ ಮೀಟರ್ ರೇಂಜ್ ಓಡಿಸಬಹುದು. ಇದಕ್ಕೆ ತಕ್ಕಂತೆ 69 ಕೆಎಂಪಿಹೆಚ್ ಟಾಪ್ ಸ್ಪೀಡ್ ಜೊತೆಗೆ ರೈಡ್ & ಇಕೋ ಎಂಬ ರೈಡಿಂಗ್ ಮೋಡ್‌ಗಳನ್ನು ಇದು ಒಳಗೊಂಡಿದೆ. 3.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.94 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮುಂದುವರೆದ ರೂಪಾಂತರಗಳು, ಭರ್ತಿ ಚಾರ್ಜ್‌ನಲ್ಲಿ ಕ್ರಮವಾಗಿ 143 ಕಿಲೋ ಮೀಟರ್ ಮತ್ತು 165 ಕಿಲೋ ಮೀಟರ್ ರೇಂಜ್ ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.
V2 ಲೈಟ್ ಕೇವಲ 4.2 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗ ಪಡೆಯಲಿದ್ದು, 69 ಕೆಎಂಪಿಹೆಚ್ ಟಾಪ್ ಸ್ಪೀಡ್ ಒಳಗೊಂಡಿರಲಿದೆ. ಅದೇ ರೀತಿ V2 Plus ಕೇವಲ 3.4 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗ ಪಡೆಯಲಿದ್ದು, 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿರಲಿದೆ. V2 Pro ರೂಪಾಂತರವು ಕೇವಲ 2.9 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗ ಪಡೆಯುವ ಮೂಲಕ ವಾಹನ ಸವಾರರಿಗೆ ಕಿಕ್ ನೀಡಲಿದೆ ಎಂದು ಕಂಪನಿ ಹೇಳಿದೆ.
ವಿ2 ಲೈಟ್ ತನ್ನ ಸಾಮಾನ್ಯ ಮತ್ತು ಪೋರ್ಟಬಲ್ ಚಾರ್ಜರ್‌ನಿಂದ 3 ಗಂಟೆ 30 ನಿಮಿಷಗಳಲ್ಲಿ 0ರಿಂದ 80 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಸಾರ್ವಜನಿಕ DC ಚಾರ್ಜರ್ ಬಳಸಿದ್ದೇ ಆದಲ್ಲಿ ಈ ನೂತನ ಎಲೆಕ್ಟ್ರಿಕ್ ಸ್ಕೂಟರ್ ಪ್ರತೀ ನಿಮಿಷಕ್ಕೆ 1km ಚಾರ್ಜ್ ಪಡೆಯುತ್ತದೆ. ಅದೇ ರೀತಿ, ಮುಂದುವರೆದ ರೂಪಾಂತರಗಳಾದ V2 ಪ್ಲಸ್ ಮತ್ತು V2 Pro ಕ್ರಮವಾಗಿ 5 ಗಂಟೆ 15 ನಿಮಿಷಗಳಲ್ಲಿ ನಿಯಮಿತ ಮತ್ತು ಪೋರ್ಟಬಲ್ ಚಾರ್ಜರ್‌ಗಳಿಂದ 0 ದಿಂದ 80 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ.
ಎಲ್ಲ ಹೀರೋ ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್‌ನ ರೂಪಾಂತರಗಳು, ಬಹುತೇಕ ಒಂದೇ ರೀತಿಯಾದ ವೈಶಿಷ್ಟ್ಯಗಳನ್ನು ಒಳಗೊಂಡಿವೆ. 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಮುಂಭಾಗದ ಡಿಸ್ಕ್ ಬ್ರೇಕ್‌ಗಳೊಂದಿಗೆ 12-ಇಂಚಿನ ಮಿಶ್ರಲೋಹದ ಚಕ್ರಗಳು, ಫಾಲೋ-ಮಿ-ಹೋಮ್ ಲೈಟ್‌ಗಳು, ಕೀಲೆಸ್ ಎಂಟ್ರಿ, ಎಲೆಕ್ಟ್ರಾನಿಕ್ ಸೀಟ್ ಮತ್ತು ಹ್ಯಾಂಡಲ್ ಲಾಕ್, ಕ್ರೂಸ್ ಕಂಟ್ರೋಲ್, ರಿವರ್ಸ್‌ನಂತಹ ವೈಶಿಷ್ಟ್ಯಗಳ ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೀ-ಜೆನ್ ಬ್ರೇಕಿಂಗ್ ಕೂಡ ಒಳಗೊಂಡಿದೆ. Vida V2 ಆರು ಬಣ್ಣಗಳಲ್ಲಿ ಬರಲಿದ್ದು, ವಿನ್ಯಾಸವು ಕೂಡ ಹೆಚ್ಚು-ಕಮ್ಮಿ ಹಳೆಯ ವಿಡಾ ವಿ1 ಇ-ಸ್ಕೂಟರ್‌ಗೆ ಹೋಲಿಕೆಯಾಗುತ್ತದೆ. ಮ್ಯಾಟ್ ನೆಕ್ಸಸ್ ಬ್ಲೂ-ಗ್ರೇ ಹಾಗೂ ಗ್ಲೋಸಿ ಸ್ಪೋರ್ಟ್ಸ್ ರೆಡ್ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೇಶೀಯ ಖರೀದಿದಾರರಿಗೆ ಲಭ್ಯ. ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್, 5 ವರ್ಷ ಅಥವಾ 50,000 ಕಿಲೋಮೀಟರ್‌ಗಳ ವಾರಂಟಿ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ 3 ವರ್ಷ ಅಥವಾ 30,000 ಕಿಲೋಮೀಟರ್‌ಗಳ ವಾರಂಟಿ ಒಳಗೊಂಡಿದೆ.