spot_img
spot_img

ಅಂಗವಿಕಲನಾದ್ರೂ ಫುಡ್ ಡೆಲಿವರಿ ಕಾಯಕ : ದಾನಿಗಳ ಸಹಾಯ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ: ಈ ಯುವಕನಿಗೆ ದೈಹಿಕ ಅಂಗವೈಕಲ್ಯ ಇರಬಹುದು. ಆದರೆ, ದುಡಿದೇ ತಿನ್ನಬೇಕೆಂಬ ಈತನ ಉತ್ಸಾಹದ ಚಿಲುಮೆಗೆ ಯಾವ‌ ವಿಕಲತೆಯೂ ಅಡ್ಡಿಯಾಗಿಲ್ಲ. ಎರಡೂ ಕಾಲುಗಳಿಗೆ ಪೋಲಿಯೋ ಕಾಯಿಲೆ ತಗುಲಿದ್ದು, ಎದೆಗುಂದದೆ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಆಗಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕ್ರೀಡಾಪಟುವೂ ಆಗಿರುವ ಇವರ ಬದುಕು ಎಂಥವರಿಗೂ ಸ್ಫೂರ್ತಿಯಾಗಬಲ್ಲದು.
ಬೆಳಗಾವಿಯ ವಿಶೇಷಚೇತನ ವ್ಯಕ್ತಿಯೊಬ್ಬರು ಫುಡ್​ ಡೆಲಿವರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಅದೆಷ್ಟೋ ಯುವಕರು ನಿರುದ್ಯೋಗಿಗಳಾಗಿ‌ ಅಲೆದಾಡುತ್ತಾರೆ. ಆದರೆ, ದಿನೇಶ ತಮಗೆ ಪೋಲಿಯೋ ಕಾಯಿಲೆಯಿಂದ ನಡೆದಾಡಲು ಸಾಧ್ಯವಾಗದ ಸ್ಥಿತಿಯಿದ್ದರೂ ಮನೆಯಲ್ಲಿ ಕುಳಿತಿಲ್ಲ. ಎಸ್ಎಸ್ಎಲ್‌ಸಿವರೆಗೆ ಓದಿರುವ ಇವರ ತಂದೆ ರಾಮದಾಸ 2008ರಲ್ಲಿ ನಿಧನ ಹೊಂದಿದರು. ಬಳಿಕ ತಾಯಿ ಕಮಲಾ ಕೂಲಿ ಕೆಲಸ ಮಾಡಿ ಇವರನ್ನು ಸಲಹಿದ್ದಾರೆ.
ತ್ರಿಚಕ್ರ ವಾಹನದ ಮೇಲೆ ಫುಡ್ ಡೆಲಿವರಿ ಮಾಡುವ ಈ ವ್ಯಕ್ತಿಯ ಹೆಸರು ದಿನೇಶ ಸಿದ್ರಗವಳಿ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಜಯನಗರದ ಜನತಾ ಕಾಲೊನಿ ನಿವಾಸಿ. “ನನ್ನ ದೇಹಕ್ಕೆ ಇನ್ನೂ ಏನಾದರೂ ಹಾನಿಯಾದರೂ ಕೂಡಾ ಕಾಯಕ ಮಾಡಿಯೇ ಬದುಕುತ್ತೇನೆ. ಯಾರ ಬಳಿಯೂ ಭಿಕ್ಷೆ ಬೇಡಿ ತಿನ್ನಲಾರೆ” ಎಂಬುದು ಇವರ ಸ್ವಾಭಿಮಾನದ ಕಿಚ್ಚು.
2010ರಲ್ಲಿ ಟೆಲಿಕಾಮ್​ ಕಂಪನಿಯೊಂದಲ್ಲಿ ಸಿಮ್​ ಮಾರಾಟ ಸೇರಿ ಮತ್ತಿತರ ಸಣ್ಣಪುಟ್ಟ ಕೆಲಸ ಶುರು ಮಾಡಿರುವ ದಿನೇಶ, ಕಳೆದ ಒಂದೂವರೆ ವರ್ಷದಿಂದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಆಗಿದ್ದಾರೆ. ಅಲ್ಲದೇ ಮೂರು ತಿಂಗಳ ಹಿಂದಷ್ಟೇ ಅಮೃತಾ ಎಂಬ ದಿವ್ಯಾಂಗ ಯುವತಿಯನ್ನು ಮದುವೆಯಾಗಿದ್ದಾರೆ. ಜೊಮ್ಯಾಟೊದಿಂದ ಬರುವ ಆದಾಯದಿಂದ ತಾಯಿ ಮತ್ತು ಪತ್ನಿಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ರಾಜ್ಯ, ರಾಷ್ಟ್ರೀಯ ಮಟ್ಟದ ಪ್ಯಾರಾ ಟೇಬಲ್ ಟೆನ್ನಿಸ್, ವ್ಹೀಲ್ ಚೇರ್ ರಗ್ಬಿ, ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಕ್ರೀಡಾಪಟು ಕೂಡಾ ಆಗಿರುವ ದಿನೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಮಹದಾಸೆ ಹೊಂದಿದ್ದಾರೆ. ಆದರೆ, ಇದಕ್ಕೆ ಒಳ್ಳೆಯ ವ್ಯವಸ್ಥೆ, ಪ್ರೋತ್ಸಾಹದ ಕೊರತೆಯಿಂದಾಗಿ ಹಿನ್ನಡೆ ಉಂಟಾಗಿದೆ. 2018ರಿಂದ ಈವರೆಗೆ ವ್ಹೀಲ್ ಚೇರ್​ ರಗ್ಬಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಾ ಟೇಬಲ್​ ಟೆನ್ನಿಸ್ ರಾಜ್ಯ ಮಟ್ಟದಲ್ಲಿ ತಲಾ ಒಂದು ಚಿನ್ನ, ಬೆಳ್ಳಿ, ಕಂಚು ಗೆದ್ದಿದ್ದಾರೆ. ವ್ಹೀಲ್ ಚೇರ್ ಬಾಸ್ಕೆಟ್ ಬಾಲ್​ನಲ್ಲಿ ತಲಾ ಒಂದು ಚಿನ್ನ ಬೆಳ್ಳಿ, ಕಂಚು ಸೇರಿ 20ಕ್ಕೂ ಅಧಿಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಎಚ್ಐಡಿ ಎಂಬ ಕಂಪನಿ ನೀಡಿರುವ ತ್ರಿಚಕ್ರ ವಾಹನವನ್ನು ಜೊಮ್ಯಾಟೊಗೆ ದಿನೇಶ ಬಳಸುತ್ತಿದ್ದರು. ಇತ್ತೀಚೆಗೆ ಅದು ಬ್ಯಾಟರಿ ಸಮಸ್ಯೆಯಿಂದ ರಿಪೇರಿಗೆ ಬಿಟ್ಟಿದ್ದಾರೆ. ಸದ್ಯ ಸ್ನೇಹಿತರೊಬ್ಬರು ನೀಡಿದ ಬೈಕ್‌ನಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದು, ಕೋಚ್ ಸಂಗಮ ಬೈಲೂರ ಅವರ ಬಳಿ ಟೇಬಲ್ ಟೆನ್ನಿಸ್ ತರಬೇತಿ ಪಡೆಯುತ್ತಿದ್ದಾರೆ.
“ಜೊಮ್ಯಾಟೊದಲ್ಲಿ ಯಾವಾಗ ಬೇಕಾದರೂ ಕೆಲಸ ಮಾಡಬಹುದು. ಇಲ್ಲವಾದರೆ ಬಿಟ್ಟು ಆಟದ ತರಬೇತಿಗೆ ಹೋಗಬಹುದು. ಹಾಗಾಗಿ, ಇದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಇನ್ನು ಅಕಾಡೆಮಿ ಸೆಂಟರ್​ಗಳು ಮೊದಲ ಮತ್ತು ಎರಡನೇ ಮಹಡಿಯಲ್ಲಿವೆ. ಹಾಗಾಗಿ, ತರಬೇತಿಗೆ ಹೋಗಲು ತೀವ್ರ ತೊಂದರೆಯಾಗುತ್ತಿದೆ. ಟೇಬಲ್​ ಟೆನ್ನಿಸ್​​​ ಟೇಬಲ್ ಮತ್ತು ಬಾಲ್​ ಥ್ರೋ ಮಾಡಲು ರೋಬೋಟಿಕ್ ಮಶಿನ್ ಅವಶ್ಯಕತೆ ಇದೆ‌. ಸರ್ಕಾರ ಇಲ್ಲವೇ ಯಾರಾದರೂ ದಾನಿಗಳು ಇದಿಷ್ಟು ಸೌಲಭ್ಯ ಕಲ್ಪಿಸಿದರೆ ಖಂಡಿತವಾಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕ ಗೆಲ್ಲುವೆ” ಎಂದು ಹೇಳಿದರು.
ಸಮಾಜಸೇವಕ ಸಂತೋಷ ಧರೇಕರ್ ಮಾತನಾಡಿ, “ದಿನೇಶ ಓರ್ವ ರಾಷ್ಟ್ರ ಮಟ್ಟದ ಕ್ರೀಡಾಪಟು. ಆತನಿಗೆ ಸದ್ಯ 1.40 ಲಕ್ಷ ರೂ. ಮೌಲ್ಯದ ರೋಬೋಟಿಕ್ ಮಶಿನ್ ಮತ್ತು 40 ಸಾವಿರ ರೂ. ಮೌಲ್ಯದ ಟೇಬಲ್​ ಟೆನ್ನಿಸ್ ಟೇಬಲ್​ ತುರ್ತಾಗಿ ಬೇಕಿದೆ. ಸರ್ಕಾರ ಮತ್ತು ದಾನಿಗಳು ಯಾರಾದ್ರೂ ನೆರವು ನೀಡಿದರೆ ಇಡೀ ದೇಶಕ್ಕೆ ಕೀರ್ತಿ ತರುವ ಸಾಮರ್ಥ್ಯ ಅವನ ಬಳಿಯಿದೆ” ಎಂದರು.
ನಾನು ಫುಡ್ ಡೆಲಿವರಿ ಮಾಡುತ್ತಿರುವುದಕ್ಕೆ ಬಹಳಷ್ಟು ಜನ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಆದರೆ ಅಪಾರ್ಟ್‌ಮೆಂಟ್​ನ ಒಂದಿಷ್ಟು ಜನ ಮೇಲೆ ಬಂದು ಆರ್ಡರ್ ಕೊಟ್ಟು ಹೋಗಲು ಆಗದಿದ್ದರೆ, ಯಾತಕ್ಕೆ ಈ ಕೆಲಸಕ್ಕೆ ಬರಬೇಕು? ಎಂದು ಮೂದಲಿಸುತ್ತಾರೆ. ಆದರೂ, ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇನೆ. ದೇವರು ಕೊಟ್ಟ ಒಳ್ಳೆಯ ಶರೀರವನ್ನು ವ್ಯರ್ಥ ಮಾಡದೇ ಕಷ್ಟಪಟ್ಟು ಎಲ್ಲರೂ ದುಡಿಯಬೇಕು. ದುಡಿಯದಿದ್ದರೆ ಸಮಾಜದಲ್ಲಿ ಅಂಥವರಿಗೆ ಮರ್ಯಾದೆ ಇರುವುದಿಲ್ಲ. ಒಂದು ವೇಳೆ ನನ್ನ ಒಂದು ಕೈ ಮತ್ತು ಕಣ್ಣಿಗೂ ಏನಾದರೂ ಹಾನಿಯಾಗಿದ್ದರೂ ನಾನು ದುಡಿಯುವುದನ್ನು ಬಿಡುತ್ತಿರಲಿಲ್ಲ. ಯಾರ ಮೇಲೂ ಅವಲಂಬಿತನಾಗಿ ಇರಲು ನಾನು ಇಷ್ಟಪಡಲ್ಲ ಎಂದು ತಿಳಿಸಿದರು.
ಹೋಟೇಲ್​​ ಮಾಲೀಕ ವಿಶಾಲ್​ ಮಾತನಾಡಿ, “ಎಲ್ಲ ಅಂಗಾಂಗಗಳು ಸರಿ ಇದ್ದವರೇ ಕೆಲಸ ಮಾಡುವುದಿಲ್ಲ. ಆದರೆ, ಎರಡೂ ಕಾಲುಗಳಿಲ್ಲದ ದಿನೇಶನ ದುಡಿಯುವ ಛಲ ನೋಡಿ ತುಂಬಾ ಖುಷಿ ಆಗುತ್ತದೆ. ಪ್ರಾಮಾಣಿಕ ಮತ್ತು ಒಳ್ಳೆಯ ಕೆಲಸಗಾರ. ಅದ್ಭುತ ಕ್ರೀಡಾಪಟುವೂ ಆಗಿರುವ ದಿನೇಶನಿಗೆ ಸರ್ಕಾರ ಕೂಡ ನೆರವು ನೀಡಬೇಕು” ಎಂದು ಆಗ್ರಹಿಸಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಪೂರಕ ಪೌಷ್ಟಿಕ ಆಹಾರ ವಿತರಣೆ ಎನ್‌ಜಿಒಗಳಿಗೆ ವಹಿಸಿ : ಶಶೀಲ್ ನಮೋಶಿ

ಕಲಬುರಗಿ : ರಾಜ್ಯದ ಎಲ್ಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ನೀಡುತ್ತಿರುವ 'ಪೂರಕ ಪೌಷ್ಟಿಕ ಆಹಾರ ವಿತರಣೆ' ಯೋಜನೆಯನ್ನು ಎನ್‌ಜಿಒಗಳಿಗೆ ವಹಿಸಬೇಕೆಂದು...

ಗಯಾನಾದಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆ: ಪ್ರಧಾನಿ ಮೋದಿ ಸಹಿ

ಜಾರ್ಜ್‍ಟೌನ್ : ಕೆರಿಬಿಯನ್ ರಾಷ್ಟ್ರ ಗಯಾನಾಕ್ಕೆ ಭಾರತವು ತನ್ನ ಔಷಧೀಯ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲಿದೆ ಮತ್ತುಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ...

ರೈತರ ಜಮೀನಿನ ಪಹಣಿ :ವಕ್ಫ್‌ ಹೆಸರು ಬೇಡ

ಬೆಂಗಳೂರು : ವಕ್ಫ್‌ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆದುಹಾಕಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ...

ರೈತರ ಕಂಗೆಡಿಸಿದ ಡೀಮ್ಡ್ ಫಾರೆಸ್ಟ್

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಜಮೀನಿಗೂ ಅರಣ್ಯ ಇಲಾಖೆಯಿಂದ ಬೇಲಿ ಹಾಕುತ್ತಿದ್ದರು. ಕೃಷಿ ಮಾಡುತ್ತಿದ್ದ ರೈತರೆಲ್ಲ ದಿಕ್ಕೆಟ್ಟು ಕೂತಿದ್ದರು. ಕೆಲವೆಡೆ ಸರಕಾರವೇ...