ನವದೆಹಲಿ: ಮೂರು ದಿನದಲ್ಲಿ 50 ಲಕ್ಷ ರೂ ಹಣ ನೀಡದಿದ್ದರೆ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಸಂಜಯ್ ಸೇಠ್ ಅವರಿಗೆ ಬೆದರಿಕೆ ಸಂದೇಶ ಬಂದಿದೆ.
50 ಲಕ್ಷ ಹಣ ನೀಡುವಂತೆ ಬೆದರಿಕೆ ಸಂದೇಶವೊಂದು ಬಂದಿದೆ ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ದೃಢಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು ತನಿಖೆಗೆ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವರು, ಬೆದರಿಕೆ ಸಂದೇಶ ಕುರಿತು ನಿನ್ನೆ ಸಂಜೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಸಿಡಿಪಿ ಮತ್ತು ಇತರೆ ಹಿರಿಯ ಅಧಿಕಾರಿಗಳು ಈ ಕುರಿತು ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಚಿವಾಲಯ ಕೂಡ ಈ ಸಂಬಂಧ ಜಾರ್ಖಂಡ್ ಡಿಜಿಪಿ ಅನುರಾಗ್ ಗುಪ್ತಾ ಅವರಿಗೆ ಔಪಚಾರಿಕ ದೂರು ನೀಡಿದೆ. ಈ ಕುರಿತು ತಕ್ಷಣಕ್ಕೆ ಕ್ರಮ ಕೈಗೊಳ್ಳುವಂತೆ ಕೂಡ ತಿಳಿಸಲಾಗಿದೆ.
ಶನಿವಾರ ಸಂಜೆ ಸಚಿವರ ಮೊಬೈಲ್ಗೆ ಈ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಬರುತ್ತಿದ್ದಂತೆ ಸೇಠ್ ಅವರು ಡಿಸಿಪಿ ಅವರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಹಾಗೇ ದೆಹಲಿ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಅವರನ್ನು ಭೇಟಿಯಾಗಿ, ಈ ಕುರಿತು ಮಾಹಿತಿ ಪಡೆದಿದ್ದಾರೆ.
ಇದೇ ವೇಳೆ ಜಾರ್ಖಂಡ್ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ನನಗಿಂತ ಹೆಚ್ಚಾಗಿ ಮುಖ್ಯಮಂತ್ರಿಗಳು ಮತ್ತು ಡಿಜಿಪಿಗಳಿಗೆ ನಿರ್ದೇಶಿಸಬೇಕು. ಪ್ರತಿಯೊಬ್ಬರ ಸುರಕ್ಷತೆ ಜೊತೆಗೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದರು.
ಮೂರು ದಿನದಲ್ಲಿ 50 ಲಕ್ಷ ರೂ ಹಣ ನೀಡಬೇಕು. ಹಣ ಪಾವತಿಸದೆ ಹೋದರೆ, ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವರಿಗೆ ದುಷ್ಕರ್ಮಿಗಳು ಬೆದರಿಕೆ ಸಂದೇಶ ರವಾನಿಸಿದ್ದಾರೆ.
ಈ ಬೆದರಿಕೆ ಸಂದೇಶ ಕಳುಹಿಸಿರುವ ಮೊಬೈಲ್ ಸಂಖ್ಯೆಯು ಜಾರ್ಖಂಡ್ನ ರಾಂಚಿಯಿಂದ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ನನ್ನ ಜವಾಬ್ದಾರಿಯಂತೆ ನಾನು ಘಟನೆ ಸಂಬಂಧ ದೂರು ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದು, ಸಾಮಾನ್ಯ ಜನರನ್ನು ಎಂದಿನಂತೆ ಭೇಟಿಯಾಗುತ್ತಿದ್ದೇನೆ. ಪೊಲೀಸರು ತಮ್ಮ ಕರ್ತವ್ಯವನ್ನು ಪರಿಣಾಕಾರಿಯಾಗಿ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.