ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದ್ದು, ರಸ್ತೆಗಳ ಸಾಮರ್ಥ್ಯ ಮೀರಿ ವಾಹನಗಳು ಓಡಾಡುತ್ತಿವೆ. ಹೀಗಾಗಿಯೇ, ಆಯ್ದ ಪ್ರಮುಖ ರಸ್ತೆಗಳ ಅಗಲೀಕರಣಕ್ಕೆ ಬಿಬಿಎಂಪಿ ಮುಂದಡಿ ಇಟ್ಟಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 12878 ಕಿ.ಮೀ. ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ 1344.84 ಕಿ.ಮೀ. ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳನ್ನು ಗುರುತಿಸಲಾಗಿದೆ.
ನಗರದಲ್ಲಿ 1.40 ಕೋಟಿಗಿಂತ ಹೆಚ್ಚು ವಾಹನಗಳು ನೋಂದಣಿಯಾಗಿವೆ. ಇದಲ್ಲದೆ, ಸುತ್ತಮುತ್ತಲ ಪ್ರದೇಶಗಳು ಹಾಗೂ ರಾಜ್ಯದ ನಾನಾ ಭಾಗಗಳಿಂದ ನಿತ್ಯ ಲಕ್ಷಾಂತರ ವಾಹನಗಳು ಬಂದು ಹೋಗುತ್ತವೆ. ಹೀಗಾಗಿ, ರಸ್ತೆ ಮೂಲಭೂತ ಸೌಕರ್ಯಗಳನ್ನೂ ಮೇಲ್ದರ್ಜೆಗೇರಿಸುವುದು ಅತ್ಯಗತ್ಯವಾಗಿದೆ.
ರಾಜಧಾನಿಯ ಹೊರವಲಯದಲ್ಲಿನ ಪಾಲಿಕೆಯ 5 ವಲಯಗಳಲ್ಲಿ ಜನಸಂಖ್ಯೆ ಹೆಚ್ಚಳದ ಜತೆಗೆ ವಾಹನಗಳ ದಟ್ಟಣೆಯೂ ಜಾಸ್ತಿಯಾಗಿದೆ. ನಗರದ ಮಿತಿ ಮೀರಿದ ಬೆಳವಣಿಗೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿವಾಹನಗಳ ಸಂಚಾರ ಹೆಚ್ಚಿದೆ. ಪರಿಣಾಮ, ವಾಹನಗಳ ವೇಗದ ಮಿತಿ ಗಂಟೆಗೆ 10 ಕಿ.ಮೀ. ದಾಟುತ್ತಿಲ್ಲ.
ಉದ್ಯೋಗ ಮತ್ತು ಇನ್ನಿತರೆ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಬರುವ ಸಾರ್ವಜನಿಕರು ಬಹುಪಾಲು ಸಮಯವನ್ನು ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಹಾನಗರವು ಕಾಂಕ್ರೀಟ್ ಕಾಡಾಗಿ ಮಾರ್ಪಟ್ಟಿದೆ. ಮೆಟ್ರೊ, ಮೇಲ್ಸೇತುವೆ, ಅಂಡರ್‌ಪಾಸ್‌ಗಳನ್ನು ನಿರ್ಮಿಸಿದರೂ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಭೂಮಿ ಬೆಲೆ ದುಬಾರಿಯಾಗಿದ್ದು, ರಸ್ತೆಗಳ ವಿಸ್ತರಣೆಗೆ ಅಗತ್ಯವಿರುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಪಾಲಿಕೆಯಲ್ಲಿಇಲ್ಲ.
ಟಿಡಿಆರ್ ಪರಿಹಾರಕ್ಕೆ ಮಾಲೀಕರು ಒಪ್ಪುತ್ತಿಲ್ಲ. ಹೀಗಾಗಿ, ನಗರದ ಹೃದಯ ಭಾಗದಲ್ಲಿ ರಸ್ತೆಗಳನ್ನು ವಿಸ್ತರಿಸುವುದು ಸವಾಲಾಗಿ ಪರಿಣಮಿಸಿದೆ.
ಇದರ ನಡುವೆಯೂ ಬಿಬಿಎಂಪಿಯು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲವೊಂದು ಆಯ್ದ ರಸ್ತೆಗಳನ್ನು ವಿಸ್ತರಿಸುವ ಸಾಹಸಕ್ಕೆ ಕೈಹಾಕಿದೆ. ಬ್ರ್ಯಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು ಯೋಜನೆಯಡಿ ವಾಹನ ದಟ್ಟಣೆ ತಗ್ಗಿಸಲು ಯೋಜನೆಗಳನ್ನು ರೂಪಿಸುತ್ತಿದೆ. ಪರಿಷ್ಕೃತ ಮಾಸ್ಟರ್ ಪ್ಲಾನ್ 2015ರ ಪ್ರಕಾರ ಪ್ರಮುಖ ರಸ್ತೆಗಳ ವಿಸ್ತರಣೆಗೆ 50 ಕೋಟಿ ರೂ.
ಅನುದಾನ ಮೀಸಲಿಡಲಾಗಿದೆ.
ರಸ್ತೆಗಳ ವಿಸ್ತರಣೆಗೆ ಪೂರ್ವಭಾವಿಯಾಗಿ ರಸ್ತೆಗಳ ಅಗಲ ಗುರುತಿಸುವಿಕೆ, ರಸ್ತೆಯ ಇಕ್ಕೆಲಗಳಲ್ಲಿನ ಕಟ್ಟಡಗಳ ತೆರವು ಕಾರ್ಯಾಚರಣೆ, ಭಗ್ನಾವಶೇಷಗಳ ಸಾಗಣೆ ಮತ್ತು ಹಾಲಿ ರಸ್ತೆಗಳಿಗೆ ಮರು ಡಾಂಬರೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದಲ್ಲದೆ,
ಕೆಲವೊಂದು ರಸ್ತೆಗಳನ್ನು ಪೂರ್ಣ ಪ್ರಮಾಣದಲ್ಲಿಅಭಿವೃದ್ಧಿಪಡಿಸಲು 50 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.
2024-25ನೇ ಸಾಲಿನ ಪಾಲಿಕೆ ಆಯವ್ಯಯದಡಿ 100 ಕೋಟಿ ರೂ. ವೆಚ್ಚದ ಕಾಮಗಾರಿಗಳ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ಕೋರಿ ಹಾಗೂ ಅಲ್ಪಾವಧಿ ಟೆಂಡರ್ ಆಹ್ವಾನಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಒಪ್ಪಿಗೆ ನೀಡುವಂತೆ ಕೋರಿ ಪಾಲಿಕೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬಿಬಿಎಂಪಿ ಹೊರವಲಯದಲ್ಲಿನ ಪ್ರಮುಖ ರಸ್ತೆಗಳ ವಿಸ್ತರಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಕನಕಪುರ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ವಿಸ್ತರಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಉದ್ದೇಶಿಸಲಾಗಿದೆ.
ಕೆಲವೊಂದು ರಸ್ತೆಗಳ ವಿಸ್ತರಣೆ ಸಂಬಂಧ ಅಗತ್ಯವಿರುವ ಜಾಗದ ಸ್ವಾಧೀನಕ್ಕೆ ಹಲವು ವರ್ಷಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈವರೆಗೆ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಭೂಮಾಲೀಕರು ಆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಲಾಗದೆ ಹಾಗೂ ಕಟ್ಟಡಗಳನ್ನು ನಿರ್ಮಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಾಮರಾಜಪೇಟೆಯ ಸಿರ್ಸಿ ವೃತ್ತದಿಂದ ವಿಜಯನಗರ ಪೈಪ್‌ಲೈನ್‌ವರೆಗಿನ 1.85 ಕಿ.ಮೀ. ಉದ್ದದ ಪಾದರಾಯನಪುರ ರಸ್ತೆ ವಿಸ್ತರಣೆಗೆ ಬ್ರ್ಯಾಂಡ್ ಬೆಂಗಳೂರು-ಸಂಚಾರ ಬೆಂಗಳೂರು ಯೋಜನೆಯಡಿ 30 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆದರೆ, ದಶಕಗಳಿಂದ ನನೆಗುದಿಗೆ ಬಿದ್ದಿರುವ ಪಾದರಾಯನಪುರ ರಸ್ತೆ ವಿಸ್ತರಣೆಗೆ ಯಾವಾಗ ಮುಹೂರ್ತ ಕೂಡಿ ಬರುತ್ತದೆಯೋ ಕಾದು ನೋಡಬೇಕಿದೆ. ಈ ಹಿಂದೆ ಹಲವು ಬಾರಿ ಸ್ಥಳೀಯರೊಂದಿಗೆ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದರೂ ಸಫಲವಾಗಿಲ್ಲ.
ರಸ್ತೆ ವಿಸ್ತರಣೆಗೆ 1,63,190 ಚ.ಅಡಿ ಜಾಗದ ಅಗತ್ಯವಿದೆ. ಸರಕಾರಿ ಮತ್ತು ಖಾಸಗಿಯವರ 292 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.