ಭಾರತೀಯ ನೌಕಾಪಡೆ ಮತ್ತು ಡಿಆರ್ಡಿಒ ಗುರುವಾರ ಸಮುದ್ರದಲ್ಲಿ ರಹಸ್ಯ ಪರೀಕ್ಷೆಗಳನ್ನು ನಡೆಸಿದೆ. ಜಲಾಂತರ್ಗಾಮಿ ಮೂಲಕ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿ ಕೆ-4 ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಭಾರತೀಯ ನೌಕಾಪಡೆ ತನ್ನ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಘಾಟ್‌ನಿಂದ K-4 SLBM ಅನ್ನು ಗುರುವಾರ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಿತು. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಈ ಕ್ಷಿಪಣಿಯ ವ್ಯಾಪ್ತಿ 3,500 ಕಿಲೋ ಮೀಟರ್ ಆಗಿದೆ.
ಒಂದು ದೇಶಕ್ಕೆ ಎರಡನೇ ಬಾರಿ ದಾಳಿ ಮಾಡಬಲ್ಲ ಸಾಮರ್ಥ್ಯ ಇದಕ್ಕಿರುವುದು ವಿಶೇಷ. ಅಂದರೆ, ಭೂಮಿಯ ಮೇಲಿನ ಪರಿಸ್ಥಿತಿ ಉತ್ತಮವಾಗಿಲ್ಲದೇ ಇದ್ದರೆ ಜಲಾಂತರ್ಗಾಮಿ ನೌಕೆ, ನೀರೊಳಗಿನಿಂದಲೇ ದಾಳಿ ಮಾಡಬಹುದು.
ಐಎನ್ಎಸ್ ಅರಿಹಂತ್ ಮತ್ತು ಅರಿಘಾಟ್ ಜಲಾಂತರ್ಗಾಮಿ ನೌಕೆಗಳು ನಾಲ್ಕು ವರ್ಟಿಕಲ್ ಲಾಂಚಿಂಗ್ ಸಿಸ್ಟಮ್ ಹೊಂದಿವೆ. ಈ ಕ್ಷಿಪಣಿ 17 ಟನ್ ತೂಕ ಮತ್ತು 39 ಅಡಿ ಉದ್ದವಿದೆ. ಇದರ ವ್ಯಾಸ 4.3 ಮೀಟರ್ ಆಗಿದ್ದು, 2,500 ಕೆ.ಜಿ ತೂಕದ ಆಯಕಟ್ಟಿನ ಪರಮಾಣು ಸಿಡಿತಲೆಗಳೊಂದಿಗೆ ಹಾರುವ ಸಾಮರ್ಥ್ಯ ಹೊಂದಿದೆ.
K-4 SLBM ಎಂಬುದು ಮಧ್ಯಂತರ ಶ್ರೇಣಿಯ ಜಲಾಂತರ್ಗಾಮಿ ಮೂಲಕ ಉಡಾಯಿಸಲಾಗುವ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿ. ಇದನ್ನು ನೌಕಾಪಡೆಯ ಅರಿಹಂತ್ ದರ್ಜೆಯ ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗಿದೆ. ಮೊದಲು ಭಾರತೀಯ ನೌಕಾಪಡೆ ಕೆ-15 ಅನ್ನು ಬಳಸುತ್ತಿತ್ತು. ಆದರೆ K-4 ಹೆಚ್ಚು ಉತ್ತಮ, ನಿಖರ, ಕುಶಲ ಮತ್ತು ಸುಲಭವಾಗಿ ನಿರ್ವಹಿಸಬಹುದಾದ ಕ್ಷಿಪಣಿಯಾಗಿದೆ.
ಈ ಕ್ಷಿಪಣಿಯ ಯಶಸ್ವಿ ಅಭಿವೃದ್ಧಿ ಉಡಾವಣೆ ಜನವರಿ 15, 2010 ರಂದು ವಿಶಾಖಪಟ್ಟಣಂ ಕರಾವಳಿಯ ಬಳಿ ನೀರಿನ ಅಡಿಯಲ್ಲಿ 160 ಅಡಿ ಎತ್ತರದ ಪೊಂಟೂನ್ ನಿರ್ಮಿಸುವ ಮೂಲಕ ಮಾಡಲಾಗಿತ್ತು.
ಮಾರ್ಚ್ 24, 2014 ರಂದು, ಮೊದಲ ಯಶಸ್ವಿ ಪರೀಕ್ಷಾ ಉಡಾವಣೆಯನ್ನು ಮತ್ತೆ ಅದೇ ಸ್ಥಳದಲ್ಲಿ ಮತ್ತು ಅದೇ ತಂತ್ರಜ್ಞಾನದೊಂದಿಗೆ ಪಾಂಟೂನ್‌ನಿಂದ ನಡೆಸಲಾಗಿತ್ತು. ಇದಾದ ನಂತರ, ಎರಡನೇ ಯಶಸ್ವಿ ಪರೀಕ್ಷೆಯನ್ನು 7 ಮಾರ್ಚ್ 2016ರಂದು ಪ್ರಾರಂಭಿಸಲಾಗಿತ್ತು. 2016 ರಲ್ಲಿ, ಐಎನ್ಎಸ್ ಅರಿಹಂತ್‌ನಿಂದ 700 ಕಿ.ಮೀ ವ್ಯಾಪ್ತಿಯ ಯಶಸ್ವಿ ಪ್ರಯೋಗವನ್ನು ಪ್ರಾರಂಭಿಸಲಾಯಿತು.
ಡಿಸೆಂಬರ್ 17, 2017ರಂದು, ನೀರೊಳಗಿನ ಪಾಂಟೂನ್ ಉಡಾವಣೆಯನ್ನೂ ನಡೆಸಲಾಯಿತು. ಆದರೆ ಅದು ಯಶಸ್ವಿಯಾಗಲಿಲ್ಲ. ಜನವರಿ 19, 2020ರಂದು, ಐದನೇ ಬಾರಿಗೆ ಪಾಂಟೂನ್‌ನಿಂದ 3,500 ಕಿ.ಮೀ ವ್ಯಾಪ್ತಿಯ ಯಶಸ್ವಿ ಪರೀಕ್ಷಾ ಉಡಾವಣೆ ನಡೆಸಲಾಯಿತು.
ಈ ಯಶಸ್ವಿ ಪರೀಕ್ಷೆಯನ್ನು 2020 ರಲ್ಲಿ ಆರನೇ ಬಾರಿಗೆ ಪ್ರಾರಂಭಿಸಲಾಯಿತು. ಇದಾದ ಬಳಿಕ ನಿನ್ನೆ ಪರೀಕ್ಷೆ ನಡೆದಿದೆ. ಈ ಎರಡು ಹಂತದ ಕ್ಷಿಪಣಿ ಸಾಲಿಡ್ ರಾಕೆಟ್ ಮೋಟರ್‌ನಲ್ಲಿ ಚಲಿಸುತ್ತದೆ. ಇದರಲ್ಲಿ ಪ್ರೊಪೆಲ್ಲೆಂಟ್ ಕೂಡ ಸಾಲಿಡ್ ಆಗಿರುತ್ತದೆ.
ಇದರ ಕಾರ್ಯಾಚರಣೆಯ ವ್ಯಾಪ್ತಿ 4,000 ಕಿ.ಮೀ ಆಗಿದೆ. ತಾನು ಮೊದಲು ಯಾರ ಮೇಲೂ ಅಣ್ವಸ್ತ್ರ ದಾಳಿ ನಡೆಸುವುದಿಲ್ಲ ಎಂಬ ನಿಯಮವನ್ನು ಭಾರತ ಅನುಸರಿಸುತ್ತಿದೆ. ಆದ್ರೆ ಶತ್ರುಗಳು ಮೊದಲು ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತ ನೀಡಲಿದೆ. ಆದ್ದರಿಂದ, ನೌಕಾಪಡೆಯಲ್ಲಿ ಇಂತಹ ಕ್ಷಿಪಣಿಗಳನ್ನು ಹೊಂದಿರುವುದು ಬಹಳ ಮುಖ್ಯ ಎಂಬುದು ತಜ್ಞರ ಅಭಿಪ್ರಾಯ.