ಉತ್ತರಪ್ರದೇಶ: ಉತ್ತರ ಪ್ರದೇಶದ ಸಂಭಾಲ್ನ ಜಾಮಾ ಮಸೀದಿ ಸಮೀಕ್ಷಾ ವರದಿಯು ಶುಕ್ರವಾರ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿಲ್ಲ. ವರದಿ ಇನ್ನೂ ಅಪೂರ್ಣವಾಗಿದೆ ಎಂದು ತಿಳಿಸಿದ ನ್ಯಾಯಾಲಯದ ಆಯುಕ್ತ ರಮೇಶ್ ಚಂದ್ರ ರಾಘವ್ ಅವರು ವರದಿ ಸಲ್ಲಿಸಲು ಇನ್ನೂ 10 ದಿನ ಕಾಲಾವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸಂಭಾಲ್ ಜಾಮಾ ಮಸೀದಿ ಸಮೀಕ್ಷಾ ವರದಿ ಸಲ್ಲಿಕೆಗೆ 10 ದಿನ ಕಾಲಾವಕಾಶ ಕೋರಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 8 ರಂದು ನಡೆಯಲಿದ್ದು, ಅವತ್ತೇ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಇನ್ನು ಮುಂದಿನ ವಿಚಾರಣೆ ಜನವರಿ 8ಕ್ಕೆ ನಡೆಯಲಿದೆ.
ನವೆಂಬರ್ 19 ಮತ್ತು ನವೆಂಬರ್ 24 ರಂದು ನಡೆಸಿದ ಸಮೀಕ್ಷೆಯ ಸಮಯದಲ್ಲಿ ಹಿಂಸಾಚಾರ ನಡೆದಿರುವುದರಿಂದ ವರದಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ಇಂದು ನಿಗದಿಯಾದಂತೆ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮತ್ತಷ್ಟು ಕಾಲಾವಕಾಶ ಕೋರಲಾಗಿದೆ ಎಂದು ರಾಘವ್ ಹೇಳಿದರು.
ಶಾಹಿ ಜಾಮಾ ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ವಕೀಲರು ತಾವು ನ್ಯಾಯಾಲಯಕ್ಕೆ ಹಾಜರಾಗಿರುವುದಾಗಿ ದೃಢಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಮಗೆ ನೀಡುವಂತೆ ಅವರು ಕೋರಿದರು. ವಾದಿಗೆ ಅರ್ಜಿಯ ಪ್ರತಿಗಳು ಮತ್ತು ಪೂರಕ ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯ ಈ ಸಂದರ್ಭದಲ್ಲಿ ಆದೇಶಿಸಿತು.
ಜಿಲ್ಲಾ ನ್ಯಾಯಾಲಯ ಆದೇಶಿಸಿದ ಸಮೀಕ್ಷೆಗೆ ತಡೆ ನೀಡಬೇಕೆಂದು ಸಂಭಾಲ್ ಶಾಹಿ ಜಾಮಾ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಆದರೆ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಸೂಕ್ತ ಕೆಳ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಉನ್ನತ ನ್ಯಾಯಾಲಯವು ಮಸೀದಿ ಸಮಿತಿಗೆ ತಿಳಿಸಿದೆ.
ನವೆಂಬರ್ 24 ರಂದು ಮೊಘಲ್ ಯುಗದ ಜಾಮಾ ಮಸೀದಿಯ ಎರಡನೇ ಸಮೀಕ್ಷೆಯ ಸಮಯದಲ್ಲಿ ಸ್ಥಳೀಯರು ಪೊಲೀಸರು ಮತ್ತು ಸಮೀಕ್ಷೆ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಸಂಭಾಲ್ ನಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು.
ಜಾಮಾ ಮಸೀದಿಯ ಆವರಣದಲ್ಲಿ ಹರಿಹರ ದೇವಾಲಯವಿದೆ ಎಂಬ ಗ್ರಹಿಕೆಯಿಂದ ಈ ಪ್ರಕರಣ ಉದ್ಭವಿಸಿದೆ. ಆದರೆ ಸಮೀಕ್ಷೆಯ ಎರಡನೇ ಹಂತದ ಸಮಯದಲ್ಲಿ ವಿವಾದವು ಉಲ್ಬಣಗೊಂಡು, ಹಿಂಸಾತ್ಮಕ ಘರ್ಷಣೆಗಳು ನಡೆದವು. ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದು, ಪೊಲೀಸರು ಮತ್ತು ಅಧಿಕಾರಿಗಳು ಸೇರಿದಂತೆ ಹಲವಾರು ಜನರಿಗೆ ಗಾಯಗಳಾಗಿವೆ.
ವಿಶೇಷವಾಗಿ ಶುಕ್ರವಾರದ ಪ್ರಾರ್ಥನೆಯ ದೃಷ್ಟಿಯಿಂದ ಸಂಭಾಲ್ ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಏತನ್ಮಧ್ಯೆ, ಈ ಪ್ರಕರಣದಲ್ಲಿ ಮುಂದೆ ಯಾವುದೇ ಕ್ರಮ ಕೈಗೊಳ್ಳದಂತೆ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಶಾಂತಿ ಹಾಗೂ ಸಾಮರಸ್ಯ ಕಾಪಾಡಿಕೊಳ್ಳುವಂತೆ ಶುಕ್ರವಾರ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.