ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಎರಡು ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ವಿಶ್ವಾಸಾರ್ಹ ಪಿಎಸ್ಎಲ್ವಿ ರಾಕೆಟ್ ಗುರುವಾರ ಸಂಜೆ 4 ಗಂಟೆ 4 ನಿಮಿಷಕ್ಕೆ ಇಲ್ಲಿನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಂಡಿತು. ಕ್ಷಣಗಣನೆ ಮುಗಿಯುತ್ತಿದ್ದಂತೆ ಪಿಎಸ್ಎಲ್ವಿಸಿ-59 ಪ್ರೋಬಾ-3 ಬಾಹ್ಯಾಕಾಶ ನೌಕೆಯನ್ನು ಅಪೇಕ್ಷಿತ ಕಕ್ಷೆಯಲ್ಲಿ ಇರಿಸಲು ಬಾಹ್ಯಾಕಾಶಕ್ಕೆ ಹಾರಿತು.
ರಾಕೆಟ್ ಉಡಾವಣೆಯ ನಂತರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಇಸ್ರೊ, “ಲಿಫ್ಟ್ ಆಫ್ ಪ್ರಕ್ರಿಯೆ ಯಶಸ್ವಿಯಾಗಿದೆ. ಇಸ್ರೋದ ತಾಂತ್ರಿಕ ಪರಿಣತಿಯೊಂದಿಗೆ ಇಎಸ್ಎಯ ಅದ್ಭುತ ಪ್ರೊಬಾ -3 ಉಪಗ್ರಹಗಳನ್ನು ನಿಯೋಜಿಸಲು ಪಿಎಸ್ಎಲ್ವಿ-ಸಿ 59 ಯಶಸ್ವಿಯಾಗಿ ಆಕಾಶಕ್ಕೆ ಹಾರಿದೆ. ಇದು ಎನ್ಎಸ್ಐಎಲ್ ನೇತೃತ್ವದ ಜಾಗತಿಕ ಕಾರ್ಯಾಚರಣೆಯ ಪ್ರಾರಂಭದ ಸೂಚನೆ. ಅಂತಾರಾಷ್ಟ್ರೀಯ ಸಹಯೋಗ ಮತ್ತು ಭಾರತದ ಬಾಹ್ಯಾಕಾಶ ಸಾಧನೆಗಳನ್ನು ಆಚರಿಸುವ ಹೆಮ್ಮೆಯ ಕ್ಷಣ” ಎಂದು ಬರೆದಿದೆ.
ಪ್ರೋಬಾ-3 (ಪ್ರಾಜೆಕ್ಟ್ ಫಾರ್ ಆನ್ಬೋರ್ಡ್ ಅನಾಟಮಿ) ಎರಡು ಉಪಗ್ರಹಗಳನ್ನು ಒಳಗೊಂಡಿದೆ. ಈ ಎರಡು ಬಾಹ್ಯಾಕಾಶ ನೌಕೆಗಳು ಒಂದಾಗಿ ಹಾರುತ್ತವೆ. ಸೂರ್ಯನ ಹೊರಗಿನ ವಾತಾವರಣವಾದ ಕರೋನಾವನ್ನು ಅಧ್ಯಯನ ಮಾಡಲು ಒಂದೇ ಮಿಲಿಮೀಟರ್ವರೆಗಿನ ನಿಖರವಾದ ರಚನೆಯನ್ನು ಕಾಪಾಡಿಕೊಳ್ಳುತ್ತವೆ.
ಆರಂಭದಲ್ಲಿ ನೌಕೆಯ ಉಡಾವಣೆಯನ್ನು ನಿನ್ನೆಯೇ (ಬುಧವಾರ) ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿತ್ತು. ಅದರಂತೆ ನೌಕೆಯು ಇಂದು (ಗುರುವಾರ) ಯಶಸ್ವಿಯಾಗಿ ಉಡಾವಣೆಯಾಗಿದೆ.
ಇಸ್ರೋದ ವಾಣಿಜ್ಯ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಇಎಸ್ಎಯಿಂದ ಈ ಉಡಾವಣೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. 44.5 ಮೀಟರ್ ಎತ್ತರದ ಧ್ರುವೀಯ ಉಪಗ್ರಹ ಉಡಾವಣಾ ವಾಹನವು ಮೊದಲ ಉಡಾವಣಾ ಪ್ಯಾಡ್ನಿಂದ ಸಂಜೆ 4.04ಕ್ಕೆ ಉಡಾವಣೆಯಾಯಿತು. ‘ಪ್ರೊಬಾಸ್’ ಎಂಬುದು ಲ್ಯಾಟಿನ್ ಪದವಾಗಿದ್ದು, ‘ಪ್ರಯತ್ನಿಸೋಣ’ ಎಂಬುದು ಇದರ ಅರ್ಥವಾಗಿದೆ.
ನಿಖರವಾದ ರಚನೆಯ ಹಾರಾಟವನ್ನು ಪ್ರದರ್ಶಿಸುವುದು ಮತ್ತು ‘ಕೊರೊನಾಗ್ರಾಫ್’ ಮತ್ತು ‘ಓಕ್ಯುಲ್ಟರ್’ ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ಜೋಡಿಸಲಾದ ಸಂರಚನೆಯಲ್ಲಿ ಒಟ್ಟಿಗೆ ಉಡಾವಣೆ ಮಾಡುವುದು ಮಿಷನ್ ಉದ್ದೇಶವಾಗಿದೆ ಎಂದು ಇಸ್ರೋ ತಿಳಿಸಿದೆ.
ಇಸ್ರೋ 2001ರಲ್ಲಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೋಬಾ -1 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.