ಜಿಲ್ಲಾ ಕ್ರೀಡಾಂಗಣದಿಂದ ಸ್ಯಾಂಜೋ ಆಸ್ಪತ್ರೆಯವರೆಗೆ ಓಟ ನಡೆಯಿತು. ನಟರಾದ ಡಾಲಿ ಧನಂಜಯ್, ನೀನಾಸಂ ಸತೀಶ್, ಸಪ್ತಮಿ ಗೌಡ ಪಾಲ್ಗೊಂಡು ಗಮನ ಸೆಳೆದರು.87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಜ್ಜಾಗುತ್ತಿದೆ. ಇಂದು ಬೆಳಗ್ಗೆ ಸಮ್ಮೇಳನದ ಪ್ರಚಾರಕ್ಕೆ ನಡೆದ ‘ಕನ್ನಡಕ್ಕಾಗಿ ಓಟ'(ಮ್ಯಾರಥಾನ್)ದಲ್ಲಿ 10,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, “ನಮ್ಮ ಜಿಲ್ಲೆಯ ಯುವಕರಲ್ಲಿ, ನಾಗರಿಕ ಬಂಧುಗಳಲ್ಲಿ ಡಿಸೆಂಬರ್ 22ರ ಸಾಯಂಕಾಲದವರೆಗೂ ಇದೇ ಉತ್ಸಾಹ ಇರಬೇಕು. ರಾಜ್ಯ, ರಾಷ್ಟ್ರ, ಹೊರರಾಷ್ಟ್ರದ ಅನೇಕ ಕನ್ನಡಿಗರು ಅಂದು ಇಲ್ಲಿಗೆ ಬರಲಿದ್ದಾರೆ.
ಆ ಕನ್ನಡಿಗರಿಗೆ ಈ ಕಾರ್ಯಕ್ರಮ ಪ್ರೇರಣೆಯಾಗಲಿ” ಎಂದರು. ವಿನಯ್ ಗುರೂಜಿ ಮಾತನಾಡಿ, “ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಮಂಡ್ಯ ಜಿಲ್ಲೆ ಕನ್ನಡದ ಉಳಿವಿಗೆ ಸಾಕ್ಷಿಯಾಗಲಿ. ಕನ್ನಡದ ನೆಲ, ಜಲ, ಭಾಷೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ.
ಕಲೆಯೊಂದಿಗೆ ಕನ್ನಡ ಬೆಳೆಸಿ” ಎಂದು ಹೇಳಿದರು.ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, “ಕನ್ನಡಮ್ಮನ ತೇರು ಎಳೆಯುವ ನುಡಿಜಾತ್ರೆಗೆ, ಭಾಷೆಯ ಜಾತ್ರೆಗೆ ಸರ್ವರೂ ಬರಬೇಕು. ನಮಗೆ ಅಸ್ತಿತ್ವ ಕೊಟ್ಟ, ಭಾಷೆ ಕಲಿಸಿದ ತಾಯಿಯ ಸಾಹಿತ್ಯ ಸಮ್ಮೇಳನಕ್ಕೆ ಸರ್ವರೂ ಬರಬೇಕು” ಎಂದು ಮನವಿ ಮಾಡಿದರು.
ಬಿಜಿಎಸ್ ಮಠದ ಪುರುಷೋತ್ತಮ ಗುರೂಜಿ, ಶಾಸಕರುಗಳಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ರವಿಕಾಂತೇ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಶಿವಾನಂದಮೂರ್ತಿ, ನಗರಸಭೆ ಅಧ್ಯಕ್ಷ ಎಂ.ಬಿ.ಪ್ರಕಾಶ್, ಮೈಸೂರು ಸಕ್ಕರೆ ಕಂಪನಿ ನಿಯಮಿತದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ವೆಂಕಟರಮಣೇ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.