ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಕಮ್ಮಾರರು, ಮೇಸ್ತ್ರಿಗಳು, ಕುಂಬಾರರು, ಬಡಗಿಗಳು ಮತ್ತು ದರ್ಜಿಗಳಂತಹ ಬಡ ಕುಶಲಕರ್ಮಿಗಳಿಗೆ ಅಕ್ಟೋಬರ್ 31ರವರೆಗೆ ಬ್ಯಾಂಕುಗಳು 1,751 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿವೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.
ಕೈಗಳು ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳಿಗೆ ಎಂಡ್ – ಟು – ಎಂಡ್ ಬೆಂಬಲವನ್ನು ಒದಗಿಸಲು ಸರ್ಕಾರವು ಸೆಪ್ಟೆಂಬರ್ 17, 2023 ರಂದು ಪಿಎಂ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸಿತು. ಈ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ‘ವಿಶ್ವಕರ್ಮರು’ ಎಂದು ಕರೆಯಲಾಗುತ್ತದೆ. 2023-2024ರಿಂದ 2027-28ರ ಹಣಕಾಸು ವರ್ಷದವರೆಗೆ ಈ ಯೋಜನೆಗೆ 13,000 ಕೋಟಿ ರೂ. ಮೀಸಲಿಡಲಾಗಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಜನ ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು ಸುಲಭವಾಗಿ ಸಾಲ ಸಿಗುವಂತೆ ಮಾಡಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಚಿವರು ಒದಗಿಸಿದ ಅಂಕಿ – ಅಂಶಗಳ ಪ್ರಕಾರ, ಪಿಎಂ ವಿಶ್ವಕರ್ಮ ಯೋಜನೆಯಡಿ 2.02 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದು, ಒಟ್ಟು 1,751.20 ಕೋಟಿ ರೂ. ಸಾಲ ಬಟವಾಡೆ ಮಾಡಲಾಗಿದೆ.
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಸಂಗ್ರಹಿಸಿದ ಮಾಹಿತಿ ಅನ್ವಯ, ಪಿಎಂ ವಿಶ್ವಕರ್ಮ ಯೋಜನೆಗೆ ಇದುವರೆಗೆ 2.58 ಕೋಟಿ ಅರ್ಜಿಗಳು ಬಂದಿದ್ದು, ಯೋಜನೆ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರಲ್ಲಿ 23.75 ಲಕ್ಷ ಅರ್ಜಿಗಳು ಮೂರು ಹಂತದ ಪರಿಶೀಲನೆ ನಂತರ ಯೋಜನೆಯ ಪ್ರಯೋಜನಗಳನ್ನು ಒದಗಿಸಲು ಯಶಸ್ವಿಯಾಗಿ ನೋಂದಾಯಿಸಲ್ಪಟ್ಟಿವೆ.
ಈ ಯೋಜನೆಯಡಿ ಸುಮಾರು 10 ಲಕ್ಷ ಜನರು ತಮ್ಮ ಉದ್ಯೋಗಕ್ಕೆ ಸೂಕ್ತವಾದ ಆಧುನಿಕ ಉಪಕರಣಗಳನ್ನು ಖರೀದಿಸಲು ಇ-ವೋಚರ್ ಗಳ ಮೂಲಕ 15,000 ರೂ.ಗಳವರೆಗೆ ಟೂಲ್ ಕಿಟ್ ಪ್ರೋತ್ಸಾಹ ಧನವನ್ನು ಪಡೆದಿದ್ದಾರೆ.
ಕುಶಲಕರ್ಮಿಗಳಿಗೆ ನೀಡಲಾಗುವ ಸಾಲಕ್ಕೆ ಶೇಕಡಾ 5 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಭಾರತ ಸರ್ಕಾರವು ಶೇಕಡಾ 8 ರಷ್ಟು ಬಡ್ಡಿ ಸಹಾಯಧನವನ್ನು ಒದಗಿಸುತ್ತದೆ. ಇದು ಒಟ್ಟಾರೆ ಸಾಲದ ವೆಚ್ಚವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ಸಾಲದ ಮೊದಲ ಕಂತನ್ನು 18 ತಿಂಗಳು ಮತ್ತು ಎರಡನೇ ಕಂತನ್ನು 30 ತಿಂಗಳುಗಳಲ್ಲಿ ಮರುಪಾವತಿ ಮಾಡಬಹುದು. ಪಿಎಂ ವಿಶ್ವಕರ್ಮ ಯೋಜನೆಯು 18 ವಿಭಿನ್ನ ಕುಶಲಕರ್ಮಿಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಕುಶಲಕರ್ಮಿ ಉದ್ಯಮಿಗಳು ಸ್ವಾವಲಂಬಿಗಳಾಗಲು ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.