ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ (Parashurama Theme Park) ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಶಿಲ್ಪಿ ಕೃಷ್ಣ ನಾಯ್ಕ ಅವರನ್ನು ಕೇರಳದಲ್ಲಿ ಪೋಲಿಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ನಾಯ್ಕ್ ಕೋರ್ಟ್ ನಲ್ಲಿ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ್ದರು.
ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ (ನ.07) ಜಾಮೀನು ತಿರಸ್ಕರಿಸಿ ಆದೇಶ ನೀಡಿತ್ತು. ಅನಂತರ ಪೊಲೀಸರು ಪತ್ತೆ ಕಾರ್ಯ ತೀವ್ರಗೊಳಿಸಿ ಹುಡುಕಾಟ ನಡೆಸಿದ್ದರು. ಕೇರಳದ ಕ್ಯಾಲಿಕಟ್ ನಲ್ಲಿ ತಲೆಮರಸಿಕೊಂಡಿದ್ದ ಕೃಷ್ಣ ನಾಯ್ಕ್ ಅವರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಲು ಯಶಸ್ವಿಯಾಗಿದ್ದಾರೆ.
ಕೃಷ್ಣ ನಾಯ್ಕ್ ‘ಕೃಷ್ ಆರ್ಟ್ ವರ್ಲ್ಡ್’ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸಿದ್ದು, ಅನಂತರ ಆರೋಪಿ ಕಂಚಿನ ಮೂರ್ತಿಯನ್ನು ಮಾಡದೆ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ಆರೋಪಿಸಿ ನಲ್ಲೂರಿನ ಕೃಷ್ಣ ಶೆಟ್ಟಿ ಅವರು ಜೂನ್ ತಿಂಗಳಲ್ಲಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನಿಂದ ವಶಪಡಿಸಿಕೊಂಡ ಪರಶುರಾಮನ ವಿಗ್ರಹದ ಬಿಡಿಭಾಗಗಳು ಕಾರ್ಕಳ ನಗರ ಠಾಣೆಯಲ್ಲಿದೆ. ಸೊಂಟದ ಕೆಳಗಿನ ಭಾಗ ಥೀಂ- ಪಾರ್ಕ್‌ನಲ್ಲಿದೆ. ಈ ನಡುವೆ 2023ರ ಅ. 13ರಂದು ಪೊಲೀಸ್ ಸರ್ಪಗಾವಲಿನಲ್ಲಿ ವಿಗ್ರಹದ ಅರ್ಧ ಭಾಗ ತೆರವಾಗಿದ್ದು, ಅದು ಎಲ್ಲಿದೆ ಹೋಗಿದೆ ? ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಬೆಂಗಳೂರಿಗೆ ಸಾಗಾಟವಾದ ಮೂರ್ತಿಯ ಅರ್ಧ ಭಾಗಕ್ಕೆ ಸಂಬಂಧಿಸಿದ ದಾಖಲೆಗಳು ಕೂಡಾ ಇಲ್ಲ ಎನ್ನುವ ಆರೋಪ ಕೂಡಾ ಇದೆ. ಇಲ್ಲಿ ವಿಗ್ರಹ ಯಾವುದು ಅಸಲಿ ?, ಯಾವುದು ನಕಲಿ ? ಎಂಬುವುದರ ಬಗ್ಗೆ ಜನತೆಯಲ್ಲಿ ಗೊಂದಲವಿದ್ದು, ಕೃಷ್ಣ ನಾಯಕ್ ವಿಚಾರಣೆ ಬಳಿಕ ಸತ್ಯ ಬಹಿರಂಗಗೊಳ್ಳಲಿದೆ.
ಮೂರ್ತಿ ನಿರ್ಮಾಣವಾದ ಜಾಗ ಗೋಮಾಳ ಜಮೀನು ಎಂಬ ಹಿನ್ನೆಲೆಯಲ್ಲಿ ಸರಕಾರದಿಂದಲೇ ಜಮೀನು ತಿರಸ್ಕೃತಗೊಂಡಿರುವ ಬಗ್ಗೆ ಮೊದಲು ಚರ್ಚೆ ಆರಂಭವಾಗಿತ್ತು. ಬಳಿಕ ಮೂರ್ತಿಯ ಗುಣಮಟ್ಟದ ಬಗ್ಗೆ ಚರ್ಚೆಗಳು, ಪ್ರತಿಭಟನೆಗಳು ಮುಂದುವರಿದಿತ್ತು.
ಬೆಂಗಳೂರಿನಲ್ಲೂ ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಧರಣಿ ನಡೆದಿತ್ತು. ಮುಂದೆ ಬೆಂಗಳೂರಿನಿಂದ ಕಾರ್ಕಳಕ್ಕೆ ವಿಗ್ರಹ ಸಾಗಾಟಕ್ಕೆ ಇ-ವೇ ಬಿಲ್ಲುಗಳೇ ಇಲ್ಲ, ವಿಗ್ರಹ ನಿರ್ಮಾಣದ ಕಾರ್ಯ ಪೂರ್ಣವಾಗಿಲ್ಲ ಎನ್ನುವ ನಿರ್ಮಿತಿ ಕೇಂದ್ರದ ಸ್ಪಷ್ಟನೆ, ಅರ್ಧ ಮೂರ್ತಿ ತೆರುವುಗೊಳಿಸಿರುವ ಬಗ್ಗೆ ವಿವಾದ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ನಿರ್ಮಾಣ ಹಂತದಲ್ಲಿದ್ದ ವಿಗ್ರಹದ ಬಿಡಿಭಾಗಗಳು ಪೊಲೀಸ್ ವಶಕ್ಕೆ, ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ತಿರಸ್ಕಾರ. ಹೀಗೆ ಒಂದಲ್ಲ ಒಂದು ವಿಚಾರದಲ್ಲಿ ಕಾರ್ಕಳ ಪರಶುರಾಮ ಥೀಂ-ಪಾರ್ಕ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿತ್ತು.