Bangalore News:
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಮಾತನಾಡಿದ ಅವರು, ”ಇದು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮ. ಇನ್ನೂ ಕೂಡ ಈ ಸರ್ಕಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸುತ್ತಿಲ್ಲವೇ” ಎಂದು ಕಿಡಿಕಾರಿದರು. ”ಸರ್ಕಾರಿ ಆಸ್ಪತ್ರೆಗಳು ಬಾಣಂತಿಯರ ಪಾಲಿಗೆ ಮರಣ ಮೃದಂಗ ಬಾರಿಸುವಂತಾಗಿದೆ. ಮಹಿಳೆಯರಿಗೆ ಎರಡು ಸಾವಿರ ರೂ. ಕೊಡುವ ಬದಲು ಮೊದಲು ಬಾಣಂತಿಯರ ಸಾವು ನಿಲ್ಲಿಸಿ” ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.
”ರಾಯಚೂರು ಒಂದರಲ್ಲಿ 11 ಬಾಣಂತಿಯರು ಮೃತಪಟ್ಟಿದ್ದಾರೆ. ಔಷಧ ನಿಯಂತ್ರಣದಲ್ಲಿ ಗೋಲ್ಮಾಲ್ ಆಗುತ್ತಿರುವುದನ್ನು ತಪ್ಪಿಸಿ, ರಾಜ್ಯದಲ್ಲಿ ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಸರ್ಕಾರ ಕೊಡಲಿ” ಎಂದರು. ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Whether a judicial inquiry:
”ಆರೋಗ್ಯ ಸಚಿವರು ರಾಜೀನಾಮೆ ಕೊಟ್ಟು ಹೊಸ ಸಚಿವರು ಬಂದರೆ ಹಾಗೂ ಸಕ್ರಿಯವಾಗಿ ಕೆಲಸ ಮಾಡಿದರೆ ಬಾಣಂತಿಯರ ಸಾವಿನ ವಿಚಾರದಲ್ಲಿ ಪರಿಹಾರ ದೊರೆಯಲು ಸಾಧ್ಯವಾಗಬಹುದು. ನಾವು ಪ್ರತಿಪಕ್ಷವಾಗಿ ಕಳೆದ ಒಂದು ವರ್ಷದಲ್ಲಿ ಹೋರಾಟ ಮಾಡಿದಷ್ಟು ಹಿಂದೆಂದೂ ಮಾಡಿಲ್ಲ. ನಾವು ಹಳೆಯ ವಿಚಾರಗಳನ್ನು ಎಲ್ಲವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೇವೆ.
ಈ ಪ್ರಕರಣದಲ್ಲೂ ಅಷ್ಟೆ, ಬಿಜೆಪಿಯಿಂದ ಸತ್ಯಶೋಧನಾ ಸಮಿತಿ ಮಾಡಿದ್ದೇವೆ. ವರದಿ ದೊರೆತ ಬಳಿಕ ಹೋರಾಟ ಮುಂದುವರಿಸಲಿದ್ದೇವೆ. ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ” ಎಂದು ಹೇಳಿದರು. ”ಬಾಣಂತಿಯರ ಸಾವಿಗೆ ಸಂಬಂಧಿಸಿದ ನ್ಯಾಯಾಂಗ ತನಿಖೆ ಬಗ್ಗೆಯಾಗಲಿ, ಡೆತ್ ಆಡಿಟ್ ಬಗ್ಗೆಯಾಗಲಿ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಕಳಪೆ ದ್ರಾವಣ ಪೂರೈಸಿದ ಕಂಪನಿ ವಿರುದ್ಧ ದೆಹಲಿಗೆ ಹೋಗಿ ದೂರು ಕೊಡುವುದಾಗಿ ಆರೋಗ್ಯ ಸಚಿವರು ಹೇಳಿದ್ದರು. ಆದರೆ ಇನ್ನೂ ಯಾಕೆ ಹೋಗಿ ದೂರು ನೀಡಿಲ್ಲ ಎಂದು ಪ್ರಶ್ನಿಸಿದ ಅಶೋಕ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಲ್ಲದಕ್ಕೂ ಕಾರಣ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದಲ್ಲದೆ, ಬಾಣಂತಿಯರ ಸಾವು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು” ಅಶೋಕ್ ಸರ್ಕಾರವನ್ನು ಒತ್ತಾಯಿಸಿದರು.
Priyank Kharge should resign if he has dignity:
“ಎಐಸಿಸಿ ಅಧ್ಯಕ್ಷರ ಮಗ ಎಂಬ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿಎಂ ಸಿದ್ದರಾಮಯ್ಯ ನಡುಗುತ್ತಿದ್ದಾರೆ. ನಾವು ಬಟ್ಟೆಹರಿದುಕೊಳ್ಳುವುದಕ್ಕಿಂತ ಮೊದಲು ಅವರ ಬಟ್ಟೆ ಹರಿದು ಹೋಗುತ್ತದೆ” ಎಂದು ಅಶೋಕ್ ಟೀಕಿಸಿದರು. “ಬಿಜೆಪಿ ಸರ್ಕಾರ ಇದ್ದಾಗ ಈಶ್ವರಪ್ಪನವರನ್ನು ಉದ್ದೇಶಿಸಿ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು. ಒಬ್ಬ ವ್ಯಕ್ತಿ ಆತ್ಮಹತ್ಯೆ ನಿರ್ಧಾರಕ್ಕೆ ಬರಬೇಕು ಎಂದರೆ ಎಷ್ಟು ಕಷ್ಟಪಟ್ಟಿರಬಹುದು, ಎಷ್ಟು ಮಂದಿ ಬೀದಿಗೆ ಬಂದಿರಬಹುದು ಎಂದು ಪ್ರಿಯಾಂಕ್ ಪ್ರಶ್ನಿಸಿದ್ದರು. ಅದೇ ಪ್ರಿಯಾಂಕ್ ಖರ್ಗೆ ಈಗ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ” ಎಂದು ಅಶೋಕ್ ಹರಿಹಾಯ್ದರು.