ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು ಮುಖ್ಯವಾಗಿ ದಕ್ಷಿಣ ಒಳನಾಡಿನಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ (ನ.14)ಕ್ಕೆ ಅನ್ವಯವಾಗುವಂತೆ ಅಲ್ಲಿನ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ರಾಜ್ಯ ಹವಾಮಾನ ಇಲಾಖೆ ಘೋಷಿಸಿದೆ. ಇಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ನವೆಂಬರ್ 14 (ಗುರುವಾರ) ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಧಾರವಾಡ, ಗದಗ, ಕೊಪ್ಪಳ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.
ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 21 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ನೈಋತ್ಯ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವಿದೆ. ಈ ಕಾರಣಕ್ಕೆ ಉಂಟಾಗಿರುವ ವಾಯು ಚಂಡಮಾರುತದ ಪರಿಚಲನೆ ಈಗ ಉತ್ತರ ತಮಿಳುನಾಡಿನ ನೈಋತ್ಯ ಬಂಗಾಳ ಕೊಲ್ಲಿಯಲ್ಲಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಲೋ ಮೀಟರ್ ಎತ್ತರದಲ್ಲಿದೆ. ಈ ಕಾರಣಕ್ಕೆ ಮತ್ತೆ ಹಿಂಗಾರು ಮಳೆ ಸ್ವಲ್ಪ ಚುರುಕಾಗಿದ್ದು, ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಳೆ ಬೀಳುತ್ತಿದೆ. ಇನ್ನು, ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಒಣ ಹವೆ ಮುಂದುವರೆದಿದೆ.
ನಿನ್ನೆಯಿಂದ ಅತಿ ಹೆಚ್ಚು ಮಳೆ 3 ಸೆಂ. ಮೀ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ಸುರಿದಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ. ಎಸ್ ಪಾಟೀಲ್ ತಿಳಿಸಿದ್ದಾರೆ.