ದಿನಗಳು ಉರುಳಿದಂತೆ ‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧೆಯ ಕಾವೇರುತ್ತಿದೆ. ಹೀಗಿರುವಾಗಲೇ, ತೊಡೆ ತಟ್ಟಿ ನಿಂತಿದ್ದ ತ್ರಿವಿಕ್ರಮ್ ಹಾಗೂ ಮಂಜು ಕೈಜೋಡಿಸಿಬಿಟ್ಟಿದ್ದಾರೆ. ಹೊಸ ಒಪ್ಪಂದಕ್ಕೆ ನಾಂದಿ ಹಾಡಿದ್ದಾರೆ.!
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಉಗ್ರಂ ಮಂಜು ಗೇಮ್ ಚೇಂಜರ್ ಆಗಿದ್ದರೆ, ತ್ರಿವಿಕ್ರಮ್ ಮೈಂಡ್ ಗೇಮ್ ಆಡೋದ್ರಲ್ಲಿ ಎಕ್ಸ್ಪರ್ಟ್.
ಆರಂಭದಲ್ಲಿ ಇವರಿಬ್ಬರೂ ಒಂದಾಗಿಯೇ ಇದ್ದರು. ಮಧ್ಯೆ ಮಧ್ಯೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದಿತು. ಉಗ್ರಂ ಮಂಜು – ತ್ರಿವಿಕ್ರಮ್ ಅದ್ಯಾವಾಗ ಒಂದಾಗ್ತಾರೋ..
ಅದ್ಯಾವಾಗ ಕಿತ್ತಾಡುತ್ತಾರೋ ಊಹಿಸೋದೇ ಕಷ್ಟ. ಇತ್ತೀಚೆಗಷ್ಟೇ ಕ್ಯಾಪ್ಟನ್ಸಿ ವಿಚಾರಕ್ಕೆ ಮಂಜು – ತ್ರಿವಿಕ್ರಮ್ ಮಧ್ಯೆ ಒಪ್ಪಂದ ಆಗಿತ್ತು. ಆದರೆ, ಕಿಚ್ಚ ಸುದೀಪ್ ಮುಂದೆ ತ್ರಿವಿಕ್ರಮ್ ಉಲ್ಟಾ ಹೊಡೆದರು ಅಂತ ಮಂಜು ಬೇಸರಗೊಂಡಿದ್ದರು. ಕೊಟ್ಟ ಮಾತನ್ನ ತ್ರಿವಿಕ್ರಮ್ ಉಳಿಸಿಕೊಳ್ಳಲಿಲ್ಲ ಅಂತ ಮೊನ್ನೆ ಮೊನ್ನೆಯಷ್ಟೇ ನಾಮಿನೇಷನ್ನಲ್ಲೂ ಮಂಜು – ತ್ರಿವಿಕ್ರಮ್ ಮಧ್ಯೆ ವಾಕ್ಸಮರ ನಡೆದಿತ್ತು.
ಈಗ ನೋಡಿದ್ರೆ, ಇದೆಲ್ಲವನ್ನೂ ಇಬ್ಬರೂ ಮರೆತಿರುವ ಹಾಗಿದೆ. ಹಳೆಯದ್ದನ್ನೆಲ್ಲಾ ಮರೆತು, ಮನಸ್ತಾಪವನ್ನ ಪಕ್ಕಕ್ಕಿಟ್ಟು, ಭಿನ್ನಾಭಿಪ್ರಾಯವನ್ನ ಬದಿಗಿಟ್ಟು ಮಂಜು – ತ್ರಿವಿಕ್ರಮ್ ಒಂದಾಗಿದ್ದಾರೆ.
ಎಲ್ಲರ ಮುಂದೆ ಕಿತ್ತಾಡಿಕೊಂಡೇ ಇದ್ದು, ಒಳಗೊಳಗೇ ಒಂದಾಗಿ ತಮ್ಮ ಇಚ್ಛೆಗೆ ತಕ್ಕಂತೆ ಆಟ ನಡೆಸುವ ಹಾಗೆ ಉಗ್ರಂ ಮಂಜು ಜೊತೆ ತ್ರಿವಿಕ್ರಮ್ ಕೈಜೋಡಿಸಿದ್ದಾರೆ.