ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ 16:12ಕ್ಕೆ ಮಿಷನ್ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದರಿಂದ ಮಿಷನ್ ಮುಂದೂಡಲಾಗಿದೆ.
ನಿಖರವಾದ ಹಾರಾಟದ ಮೂಲಕ ಸೂರ್ಯನ ಕರೋನಾವನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾದ ನವೀನ ಮಿಷನ್ ಪ್ರೋಬಾ -3 ಭಾರತದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ-ಎಕ್ಸ್ಎಲ್) ಮೂಲಕ ಇಸ್ರೋದ ಪರಿಣಿತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಉಡಾವಣೆಯಾಗಲಿದೆ. ಈ ಮುನ್ನ 11:38 ಸಿಇಟಿ (10:38 ಜಿಎಂಟಿ, 16:08 ಭಾರತೀಯ ಕಾಲಮಾನ)ಕ್ಕೆ ಉಡಾವಣೆ ನಿಗದಿಯಾಗಿತ್ತು. ನಾಳಿನ ಉಡಾವಣೆಯು ಇಸ್ರೋದ ಯೂಟ್ಯೂಬ್ ಚಾನೆಲ್ ಮತ್ತು ಇಎಸ್ಎ ವೆಬ್ ಟಿವಿಯಲ್ಲಿ ನೇರಪ್ರಸಾರವಾಗಲಿದೆ.
ಕೊರೊನೊಗ್ರಾಫ್ ಮತ್ತು ಅಕ್ಯುಲ್ಟರ್ ಬಾಹ್ಯಾಕಾಶ ನೌಕೆಗಳೆರಡರ ನಿಖರ ರಚನೆಯ ಹಾರಾಟವನ್ನು ಪ್ರದರ್ಶಿಸುವುದು ಈ ಬಾಹ್ಯಾಕಾಶ ಕಾರ್ಯಾಚರಣೆಯ ಉದ್ದೇಶವಾಗಿದೆ. ಉಡಾವಣೆಗೊಂಡ ಉಪಗ್ರಹವು ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಇರುವಂತೆ ಮಾಡಲು ನಿಖರವಾದ ನಿಯಂತ್ರಣ ತಂತ್ರಗಳು ಮತ್ತು ಅಳತೆಗಳನ್ನು ಬಳಸಲಾಗುತ್ತದೆ.
ಕೊರೊನಾಗ್ರಾಫ್ ಮತ್ತು ಅಕ್ಯುಲ್ಟರ್ ಇವೆರಡೂ ವಿಶೇಷ ಸಾಧನಗಳಾಗಿದ್ದು, ಸೌರ ಕೊರೊನೊಗ್ರಾಫ್ ಇದು ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಹೊರಭಾಗವನ್ನು ಅಧ್ಯಯನ ಮಾಡಲಿದೆ. ಕರೋನಾದ ತಾಪಮಾನವು 2 ಮಿಲಿಯನ್ ಡಿಗ್ರಿ ಫ್ಯಾರನ್ ಹೀಟ್ ಆಗಿರುವುದರಿಂದ ಈ ಭಾಗವನ್ನು ಸೂಕ್ಷ್ಮವಾಗಿ ಗಮನಿಸುವುದು ಕಷ್ಟದ ಕೆಲಸವಾಗಿದೆ. ಕರೋನಾದಿಂದ ಉಂಟಾಗುವ ಸೌರ ಬಿರುಗಾಳಿಗಳು ಮತ್ತು ಮಾರುತಗಳು ಭೂಮಿಯ ಮೇಲಿನ ನೌಕಾಯಾನ, ವಿದ್ಯುತ್ ಗ್ರಿಡ್ಗಳು ಮತ್ತು ಉಪಗ್ರಹ ಸಂವಹನಗಳನ್ನು ಅಡ್ಡಿಪಡಿಸುವುದರಿಂದ ಈ ಬಗ್ಗೆ ಸೂರ್ಯನ ಕರೋನಾದ ಅಧ್ಯಯನ ಮಾಡುವುದು ಮಹತ್ವದ್ದಾಗಿದೆ.
ಕೊರೊನೊಗ್ರಾಫ್ ಮತ್ತು ಅಕ್ಯುಲ್ಟರ್ ಒಟ್ಟಾಗಿ ಒಂದೇ ಉಪಗ್ರಹವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸೂರ್ಯಗ್ರಹಣದ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನೈಸರ್ಗಿಕ ಗ್ರಹಣ 10 ನಿಮಿಷದ ಅವಧಿಯದ್ದಾಗಿರುತ್ತದೆ. ಇದಕ್ಕೆ ಹೋಲಿಸಿದರೆ ಪ್ರೊಬಾ ಮಿಷನ್ನ ಗ್ರಹಣವು 6 ಗಂಟೆಗಳ ಕಾಲ ಇರಲಿದೆ. ಯಶಸ್ವಿ ಉಡಾವಣೆಯಾದರೆ ಪ್ರೋಬಾ -3 ವಿಶ್ವದ ಮೊದಲ ‘ನಿಖರ ರಚನೆ ಹಾರಾಟ’ ಉಪಗ್ರಹವಾಗಲಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now