Ramnagar News:
ಚನ್ನಪಟ್ಟಣ ತಾಲೂಕಿನಲ್ಲಿ ನಿರಂತರ ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಕ್ಯಾಪ್ಟನ್ ಮಹೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಉಪಟಳ ನೀಡುತ್ತಿದ್ದ ಎರಡು ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದ್ದು, ಇದರ ಬೆನ್ನಲ್ಲೇ ಕ್ಯಾಪ್ಟನ್ ಮಹೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ಆಂಭಗೊಂಡಿದೆ.
ಚನ್ನಪಟ್ಟಣ ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿಯಿಂದ ನಲುಗಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಯಾವುದೇ ಅಪಾಯ ಆಗದೇ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಸಾರಥ್ಯದಲ್ಲಿ ತಾಲೂಕಿನ ಕೆಂಗಲ್ ಹನುಮಂತಯ್ಯ ದೇವಸ್ಥಾನದಲ್ಲಿ ಆನೆಗೆ ಪೂಜೆ ಮಾಡಲಾಯಿತು.
ಕೆಲ ವರ್ಷಗಳ ಹಿಂದೆ ಮಹೇಂದ್ರ ಆನೆಯನ್ನು ಹಿಡಿದು ಅರಣ್ಯ ಸಿಬ್ಬಂದಿ ಪಳಗಿಸಿದ್ದರು. ಇದೀಗ ಅದೇ ಆನೆಯ ನಾಯಕತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಇಂದು ಒಂದು ಆನೆ ಸೆರೆಗೆ ಸರ್ವ ಸಿದ್ಧತೆ ಮಾಡಕೊಳ್ಳಲಾಗಿದ್ದು, ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಜೊತೆಗೆ ವೈದ್ಯಕೀಯ ತಂಡವೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.
ಪೂಜೆ ಮುಗಿಸಿ ಆನೆಗಳ ತಂಡ ಕಾಡಿನೆಡೆಗೆ ಹೊರಟವು. ಸಿ.ಪಿ.ಯೋಗೇಶ್ವರ್ ಮಾತನಾಡಿ, “ದಶಕಗಳಿಂದ ನಮ್ಮ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ನಿರಂತವಾಗಿದೆ. ಆನೆಗಳ ಸೆರೆಗೆ ಸಾಕಷ್ಟು ಪ್ರಯತ್ನ ಕೂಡ ಮಾಡಲಾಗಿದೆ. ಅದರಂತೆ ಕಾಡಾನೆ ಸೆರೆಗಾಗಿ ಆನೆಗಳ ತಂಡ ರಚನೆ ಮಾಡಿಕೊಂಡು ಕ್ರಮ ಕೈಗೊಳ್ಳಲಾಗಿದೆ” ಎಂದರು.
ಲಕ್ಷ್ಮಿಹೆಬ್ಬಾಳ್ಕರ್ಗೆ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಈ ವಿಚಾರವಾಗಿ ಈಗ ಚರ್ಚೆ ನಡೆಯುತ್ತಿದೆ. ಅವರ ವಿರುದ್ಧ ದೂರು ದಾಖಲಾಗಿ ಅರೆಸ್ಟ್ ಆಗಿದ್ದಾರೆ. ಆದರೆ ಒಬ್ಬ ಹೆಣ್ಣುಮಗಳನ್ನು ಸದನದಲ್ಲಿ ಈ ರೀತಿ ನಡೆಸಿಕೊಳ್ಳುವುದು ಶೋಭೆ ತರುವುದಿಲ್ಲ. ಸದನ ಒಂದು ದೇವಾಲಯ, ಅಲ್ಲಿ ಈ ರೀತಿ ಆಗಬಾರದು” ಎಂದು ಹೇಳಿದರು.