ಉಡುಪಿ: ದೇಶದ ಸುಮಾರು 25 ಸಾಂಪ್ರ ದಾಯಿಕ ಕುಲ ಕಸುಬುಗಳನ್ನು ಪ್ರೋತ್ಸಾಹಿಸಿ ಅಗತ್ಯ ತರಬೇತಿ ಮತ್ತು ಸೌಲಭ್ಯವನ್ನು ಒದಗಿಸಲು ಕೇಂದ್ರ ಸರಕಾರ ಕಳೆದ ವರ್ಷ ಜಾರಿಗೆ ತಂದ ಪಿಎಂ ವಿಶ್ವಕರ್ಮ ಯೋಜನೆಯ ನೋಂದಣಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023ರ ಸೆಪ್ಟಂಬರ್‌ನಲ್ಲಿ ಜಾರಿಯಾದ ಈ ಯೋಜನೆಗೆ ಆರಂಭದಲ್ಲಿ ದೇಶದ ಕೆಲವು ಜಿಲ್ಲೆಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಅನಂತರ ಎಲ್ಲ ಜಿಲ್ಲೆಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿತ್ತು. ಈವರೆಗೆ ದೇಶದಲ್ಲಿ 2.58 ಕೋಟಿ ಅರ್ಜಿಗಳು ಸ್ವೀಕೃತವಾಗಿದ್ದು, ಮೂರು ಹಂತಗಳ ಪರಿಶೀಲನೆಯ ಬಳಿಕ ಅಂತಿಮ ಹಂತದ ನೋಂದಣಿಗೆ 23.7 ಲಕ್ಷ ಅರ್ಜಿಗಳು ಅರ್ಹವಾಗಿವೆ.
ಅಂತಿಮವಾಗಿ ಈವರೆಗೆ ದೇಶದ 10 ಲಕ್ಷ ಜನರು ಈ ಯೋಜನೆಯ ಫಲಾನುಭವ ಪಡೆಯುತ್ತಿದ್ದಾರೆ.
ಕರ್ನಾಟಕದಿಂದಲೇ 28,78,482 ಅರ್ಜಿಗಳು ಸ್ವೀಕೃತವಾಗಿದ್ದು, ಇದು ದೇಶದಲ್ಲಿ ಅತ್ಯಧಿಕವಾಗಿದೆ. ಮೂರು ಹಂತಗಳ ಪರಿಶೀಲನೆಯ ಅನಂತರ 5,19,346 ಅರ್ಜಿದಾರರು ಯೋಜನೆಯ ಫಲಾನುಭವ ಪಡೆಯಲು ಅರ್ಹರಾಗಿದ್ದಾರೆ.
ಬೆಳಗಾವಿಯಿಂದ ಅತೀ ಹೆಚ್ಚು, 2.55 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದರೆ ಕೊಡಗಿನಿಂದ ಅತೀ ಕಡಿಮೆ, 8,899 ಅರ್ಜಿಗಳು ಸಲ್ಲಿಕೆಯಾಗಿವೆ. ತುಮಕೂರಿನಿಂದ 61,706 ಅರ್ಜಿಗಳು ಅಂತಿಮ ಹಂತಕ್ಕೆ ತಲುಪಿದ್ದರೆ ವಿಜಯಪುರದಿಂದ ಅತೀ ಕಡಿಮೆ ಅಂದರೆ 1,138 ಅರ್ಜಿಗಳು ಅಂತಿಮ ಹಂತಕ್ಕೆ ತಲುಪಿವೆ.
ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಯಾದ ಅರ್ಜಿಗಳನ್ನು ಮೊದಲು ಗ್ರಾ.ಪಂ./ ನಗರ ಸ್ಥಳೀಯ ಸಂಸ್ಥೆಗಳು ಅಧ್ಯಕ್ಷರು (ಅಧ್ಯಕ್ಷರಿಲ್ಲದೆ ಇದ್ದರೆ ಆಡಳಿತಾಧಿಕಾರಿಗಳು) ಪರಿಶೀಲಿಸಿ ಅನುಮೋದನೆ ನೀಡಬೇಕು. ಅನಂತರ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಸಮಿತಿ ಪರಿಶೀಲಿಸುತ್ತದೆ.
ಸಮಿತಿಯಲ್ಲಿ ಜಿಲ್ಲಾಧಿಕಾರಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇರುತ್ತಾರೆ. ಈ ಸಮಿತಿ ಅನುಮೋದಿಸಿದ ಅರ್ಜಿ ರಾಜ್ಯ ಮಟ್ಟಕ್ಕೆ ಹೋಗುತ್ತದೆ. ರಾಜ್ಯ ಸಮಿತಿ ಪರಿಶೀಲಿಸಿ ಅನುಮೋದಿಸಿದ ಅರ್ಜಿಗಳ ಫಲಾನುಭವಿಗಳು ತರಬೇತಿಗೆ ಅರ್ಹತೆ ಪಡೆಯುತ್ತಾರೆ.
ಅರ್ಹತೆ ಪಡೆದ ಫಲಾನುವಿಗಳಿಗೆ ಆಯಾ ವಿಭಾಗದಲ್ಲಿ ಆಯಾ ಜಿಲ್ಲೆಯ ತರಬೇತಿ ಸಂಸ್ಥೆಯಿಂದ ಅಲ್ಪಾವಧಿ ತರಬೇತಿ ನೀಡಲಾಗುತ್ತದೆ.
ತರಬೇತಿ ಅವಧಿಯಲ್ಲಿ ಶಿಷ್ಯವೇತನವನ್ನು ನೀಡಲಾಗುತ್ತದೆ. ತರಬೇತಿಯ ಬಳಿಕ 15 ಸಾವಿರ ರೂ.ಗಳ ಟೂಲ್‌ಕಿಟ್ ಒದಗಿಸಲಾಗುತ್ತದೆ. ಜತೆಗೆ ಆರಂಭದಲ್ಲಿ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ, ಅದು ಮರುಪಾವತಿಯಾದ ಅನಂತರ 2 ಲಕ್ಷ ರೂ.ದವರೆಗೆ ಕನಿಷ್ಠ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ.
ಕಾರ್ಪೇಂಟರ್ , ದೋಣಿ ಸಿದ್ಧಪಡಿಸುವವರು, ಚಿನ್ನಾಭರಣ ತಯಾರಕರು, ಬಡಗಿಗಳು, ಕುಲುಮೆ ಕೆಲಸಗಾರರು, ಟೈಲರ್, ಕಮ್ಮಾರರು, ಬುಟ್ಟಿ-ಚಾಪೆ, ಬಾಸ್ಕೆಟ್ ನೇಯ್ಗೆಗಾರರು, ಅಕ್ಕ ಸಾಲಿ ಗರು, ಅಗಸರು, ಶಿಲ್ಪಿ ಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು, ಕುಂಬಾ ರರು, ಚಮ್ಮಾ ರರು, ದರ್ಜಿ ಗಳು, ಕೇಶ ವಿನ್ಯಾ ಸ ಕರು, ಗಾರೆಗಾರರು, ಮಾಲೆ ತಯಾರಕರು, ಮೀನುಗಾರಿಕೆ ಬಲೆ ಸಿದ್ಧಪಡಿಸುವರ ಸಹಿತ ಸುಮಾರು 25 ಕುಲ ಕಸುಬುದಾರರನ್ನು ಇದರಲ್ಲಿ ಸೇರಿಸಲಾಗಿದೆ.
ದೇಶಾದ್ಯಂತ ಮೇಸ್ತ್ರಿ ವಿಭಾಗದಲ್ಲಿ 4,25,881, ಟೈಲರಿಂಗ್ ವಿಭಾಗದಲ್ಲಿ 3,96,800, ಕಾಪೆìಂಟರ್ ವಿಭಾಗದಲ್ಲಿ 3,59,101, ಕೇಶ ವಿನ್ಯಾಸ ವಿಭಾಗದಲ್ಲಿ 1,90,037, ಮಾಲೆ ತಯಾರಿಕೆ ವಿಭಾಗದಲ್ಲಿ 1,71,237, ಬುಟ್ಟಿ ನೇಯ್ಗೆ ವಿಭಾಗದಲ್ಲಿ 1,26,534 ಹಾಗೂ ಧೋಬಿ ವಿಭಾಗದಲ್ಲಿ 1,07,644 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಪಿಎಂ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಪ್ರಸ್ತುತ ಯೋಜನೆಯಡಿ ಕುಶಲಕರ್ಮಿಗಳ ಅರ್ಜಿ ಸಲ್ಲಿಕೆಯಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಆದರೆ ಕುಶಲಕರ್ಮಿಗಳಿಗೆ ನೀಡಬೇಕಾದ ತರಬೇತಿಯಲ್ಲಿ ಹಾಗೂ ಬ್ಯಾಂಕ್‌ಗಳ ಮೂಲಕ ಸಾಲ ಬಿಡುಗಡೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಎಂಎಸ್ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾದ ನಿತೇಶ್ ಪಾಟೀಲ್ ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಿಂದ 16,147 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 6,682 ಅರ್ಜಿಗಳು ಅಂತಿಮ ಹಂತಕ್ಕೆ ತಲುಪಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 24,282 ಅರ್ಜಿಗಳಲ್ಲಿ 6,719 ಅರ್ಜಿ ಅಂತಿಮ ಹಂತಕ್ಕೆ ತಲುಪಿ ಫಲಾನುಭವಿಗಳ ಆಯ್ಕೆಯಾಗಿದೆ. ವಿವಿಧ ಹಂತಗಳಲ್ಲಿ ಉಡುಪಿಯ 10 ಸಾವಿರ ಹಾಗೂ ದ.ಕ.ದ 16 ಸಾವಿರ ಅರ್ಜಿಗಳು ಪರಿಶೀಲನೆಯಲ್ಲಿವೆ. ಗುಣಮಟ್ಟದ ಆಯ್ಕೆಯಲ್ಲಿ ಕರಾವಳಿ ಜಿಲ್ಲೆಗಳು ಮುಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೈಲರಿಂಗ್ ವಿಭಾಗದಿಂದಲೇ ಅತೀ ಹೆಚ್ಚು ಅರ್ಜಿಗಳು ಬಂದಿರುವುದರಿಂದ ಸದ್ಯ ಈ ವಿಭಾಗವನ್ನು ತಾತ್ಕಾಲಿಕ ಸ್ಥಗಿತಗೊಳಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಸಾಂಪ್ರ ದಾಯಿಕ ವಾಗಿ ಟೈಲರಿಂಗ್ ಮಾಡಿಕೊಂಡು ಬರುತ್ತಿರುವ ವರನ್ನು ಗುರುತಿಸಿ ಯೋಜನೆಯೊಳಗೆ ತರಲು ಹೀಗೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.