ಅಹಮದಾಬಾದ್: ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರನ್ನು ಕಾಯಂ ಹುದ್ದೆಯಲ್ಲಿ ಇರುವ ಸರ್ಕಾರಿ ನೌಕರರಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಗುಜರಾತ್ ಹೈಕೋರ್ಟ್, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಆದೇಶವು ದೇಶದಾದ್ಯಂತ ಇರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಸರ್ಕಾರಿ ನೌಕರರ ಜೊತೆ ಹೋಲಿಸಿದಾಗ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಗೆ ತಾರತಮ್ಯ ಆಗುತ್ತಿದೆ ಎಂಬುದು ಬಹಳ ಸ್ಪಷ್ಟ ಎಂದು ನ್ಯಾಯಮೂರ್ತಿ ನಿಖಿಲ್ ಎಸ್. ಕರಿಯೆಲ್ ಅವರು ಆದೇಶದಲ್ಲಿ ಹೇಳಿದ್ದಾರೆ. ಈ ಎರಡು ಹುದ್ದೆಗಳನ್ನು ಸರ್ಕಾರಿ ಸೇವೆಯಲ್ಲಿ ಸೇರಿಸಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ನೀತಿಯೊಂದನ್ನು ರೂಪಿಸಬೇಕು, ಅದರ ಪರಿಣಾಮವಾಗಿ ಸಿಗುವ ಪ್ರಯೋಜನಗಳನ್ನು ಅವರಿಗೆ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಅಡಿಯಲ್ಲಿ 1983ರಿಂದ 2010ರ ನಡುವೆ ನೇಮಕ ಆದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.
ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ, ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೂ ಇವರಿಗೆ ಕಡಿಮೆ ಗೌರವಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ನೌಕರರಿಗೆ ಸಿಗುವ ಯಾವ ಪ್ರಯೋಜನಗಳೂ ಇವರಿಗೆ ಸಿಗುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಆದೇಶದ ಪ್ರತಿಯನ್ನು ಅಕ್ಟೋಬರ್ 30ರಂದು ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ.
ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳಿಗೆ ₹10,000 ಹಾಗೂ ಸಹಾಯಕರಿಗೆ ₹5,000 ಗೌರವಧನ ನೀಡುತ್ತಿರುವುದು ಸರ್ಕಾರದ ಇತರ ನಾಗರಿಕ ಹುದ್ದೆಗಳಲ್ಲಿ ಇರುವವರಿಗೆ ನೀಡುವ ವೇತನಕ್ಕೆ ಹೋಲಿಸಿದರೆ ತಾರತಮ್ಯದ ನಡೆ ಎಂಬುದು ಸ್ಪಷ್ಟ ಎಂದು ಕೋರ್ಟ್ ಹೇಳಿದೆ.
ತಾರತಮ್ಯದ ವಿಚಾರವನ್ನು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ನಿಭಾಯಿಸಬೇಕಿರುವ ಕರ್ತವ್ಯಗಳು ಹಾಗೂ ಅವರು ಹೊರಬೇಕಿರುವ ಹೊಣೆಯನ್ನು ಸರ್ಕಾರದ ನಾಗರಿಕ ಹುದ್ದೆಗಳಲ್ಲಿ ಇರುವ ನೌಕರನ ಕರ್ತವ್ಯ, ಹೊಣೆಗಳ ಜೊತೆ ಹೋಲಿಸಿ ನೋಡಬೇಕು ಎಂದು ಪೀಠ ವಿವರಿಸಿದೆ.
ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಹೊಣೆ ಬಹಳ ದೊಡ್ಡದು. ಹೀಗಿದ್ದರೂ ಅವರಿಗೆ ಬಹಳ ಕಡಿಮೆ ಗೌರವಧನ ನೀಡಲಾಗುತ್ತಿದೆ. ಗುಜರಾತ್ ರಾಜ್ಯದಲ್ಲಿ ನಾಗರಿಕ ಹುದ್ದೆಗಳಲ್ಲಿ ಇರುವ ಸರ್ಕಾರಿ ನೌಕರರಿಗೆ ನೀಡುವ ಯಾವುದೇ ಸೌಲಭ್ಯಗಳು ಇವರಿಗೆ ಸಿಗುತ್ತಿಲ್ಲ ಎಂದು ಹೇಳಿದೆ.
‘ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ತಾತ್ಕಾಲಿಕ ಹುದ್ದೆಯಲ್ಲಿರುವ ದರ್ಜೆಯ ನೌಕರನಿಗಿಂತಲೂ ಕಡೆಯಾಗಿಸಿದೆ. ಈ ಹುದ್ದೆಯಲ್ಲಿ ಇರುವವರಿಗೆ ಕನಿಷ್ಠ ₹15 ಸಾವಿರ ಸಿಗುತ್ತದೆ. ಆದರೆ, ಹೆಚ್ಚಿನ ಮೊತ್ತ ಕೇಳುವ ಸ್ಥಿತಿ ಇಲ್ಲದಿರುವುದು, ತನ್ನನ್ನು ಮತ್ತು ತನ್ನ ಕುಟುಂಬವನ್ನು ಸಲಹಬೇಕಿರುವ ಅನಿವಾರ್ಯದ ಸ್ಥಿತಿಯನ್ನ ಹೊರತುಪಡಿಸಿದರೆ ಆತ್ಮಗೌರವ ಇರುವ ಯಾವುದೇ ವ್ಯಕ್ತಿಯು ಕನಿಷ್ಠ ವೇತನಕ್ಕಿಂತ ಕಡಿಮೆ ಮೊತ್ತಕ್ಕೆ ಕೆಲಸ ಮಾಡಲು ಸಿದ್ಧಳಿರುವುದಿಲ್ಲ. ಅದರಲ್ಲೂ, ಸರ್ಕಾರವೇ ನೌಕರದಾತ ಆಗಿರುವಾಗ ಕನಿಷ್ಠ ವೇತನಕ್ಕಿಂತ ಕಡಿಮೆ ಮೊತ್ತಕ್ಕೆ ಕೆಲಸ ಮಾಡಲು ಯಾರೂ ಒಪ್ಪರು’ ಎಂದು ಪೀಠವು ಹೇಳಿದೆ.
ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ಹುದ್ದೆಗಳನ್ನು ಸರ್ಕಾರಿ ಸೇವೆಗಳಿಗೆ ಸೇರಿಸಿಕೊಳ್ಳಲು ಮತ್ತು ಅವರಿಗೆ ತತ್ಪರಿಣಾಮದ ಕಾಯಮಾತಿ ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು, ಕೋರ್ಟ್ ಆದೇಶವು ಗುಜರಾತ್ ಹೈಕೋರ್ಟ್‌ನ ಪೋರ್ಟಲ್‌ನಲ್ಲಿ ಪ್ರಕಟವಾದ ಆರು ತಿಂಗಳಲ್ಲಿ ಜಂಟಿಯಾಗಿ ನೀತಿಯೊಂದನ್ನು ರೂಪಿಸಬೇಕು ಎಂದು ಸೂಚನೆ ನೀಡಲಾಗಿದೆ.
ನೀತಿ ರೂಪಿಸುವುದು ಪೂರ್ಣಗೊಳ್ಳುವವರೆಗೆ, ಅರ್ಜಿದಾರ ಅಂಗನವಾಡಿ ಕಾರ್ಯಕರ್ತರಿಗೆ, ತೃತೀಯ ವರ್ಗದ ಹುದ್ದೆಗಳಿಗೆ ನೀಡುವ ಕನಿಷ್ಠ ವೇತನ ಶ್ರೇಣಿಯನ್ನು ನಿಗದಿ ಮಾಡಬೇಕು, ಸಹಾಯಕರಿಗೆ ನಾಲ್ಕನೆಯ ವರ್ಗದ ಹುದ್ದೆಗಳಿಗೆ ನೀಡುವ ಕನಿಷ್ಠ ವೇತನ ಶ್ರೇಣಿಯನ್ನು ನಿಗದಿ ಮಾಡಬೇಕು