ಸಂಭಾಲ್(ಉತ್ತರ ಪ್ರದೇಶ): ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರೊಬ್ಬರು ಸಲ್ಲಿಸಿದ್ದ ಮನವಿ ಪುರಸ್ಕರಿಸಿದ ನ್ಯಾಯಾಲಯ, ಸಮೀಕ್ಷೆ ನಡೆಸುವಂತೆ ನ.19ರಂದು ಆದೇಶಿಸಿತ್ತು.
ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸಲು ಕೋರ್ಟ್ ನೇಮಿಸಿದ ಎಎಸ್ಐ ತಂಡ ಸ್ಥಳೀಯ ನ್ಯಾಯಾಲಯಕ್ಕೆ ಇಂದು ವರದಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಸಂಭಾಲ್ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಾಹಿ ಜಾಮಾ ಮಸೀದಿ ಜಾಗದಲ್ಲಿ ಈ ಹಿಂದೆ ಹರಿಹರ ದೇಗುಲವಿತ್ತು. ಇದನ್ನು ಕೆಡವಿ ಮೊಘಲ್ ಕಾಲದಲ್ಲಿ ಮಸೀದಿ ನಿರ್ಮಿಸಲಾಗಿದೆ. ಇದರ ಸಮೀಕ್ಷೆಗೆ ಅವಕಾಶ ನೀಡಬೇಕು ಎಂಬ ವಾದವನ್ನು ಅರ್ಜಿದಾರರು ಮಂಡಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ನ.19ರಂದು ಸಮೀಕ್ಷೆಗೆ ಅವಕಾಶ ನೀಡಿತ್ತು. ಅಂದಿನಿಂದ ಜಿಲ್ಲೆಯಲ್ಲಿ ಬಿಗುವಿನ ವಾತಾವರಣವಿದೆ.
ಸದ್ಯ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ, ತಪ್ಪು ಮಾಹಿತಿ ಹರಡುವಿಕೆ ತಡೆಯುವ ಉದ್ದೇಶದಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮುಸ್ಲಿಂ ಪರ ವಕೀಲ ಶಕೀಲ್ ಅಹ್ಮದ್ ವಾರ್ಸಿ ಮಾತನಾಡಿ, “ನಮ್ಮ ಪ್ರಕರಣವನ್ನು ಮಂಡಿಸಲು ಸಂಪೂರ್ಣವಾಗಿ ತಯಾರಾಗಿದ್ದೇವೆ. ನಾವು ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಹೊಂದಿದ್ದೇವೆ. ಕೋರ್ಟ್ಗೆ ನೀಡಲಾಗುವ ಸಮೀಕ್ಷಾ ವರದಿಯ ಪ್ರತಿಯನ್ನು ಮೊದಲಿಗೆ ನಮಗೆ ನೀಡುವಂತೆ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.
ಸಮೀಕ್ಷಾ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಚಂಡೌಸಿಯಲ್ಲಿನ ಸ್ಥಳೀಯ ನ್ಯಾಯಾಲಯದ ಸುತ್ತಮುತ್ತ ಮತ್ತು ಧಾರ್ಮಿಕ ಸ್ಥಳಗಳ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ತಿಳಿಸಿದರು.
ಹಿಂದೂ ಅರ್ಜಿದಾರರಾದ ಪರ ವಕೀಲ ಗೋಪಾಲ್ ಶರ್ಮಾ ಮಾತನಾಡಿ, “ಶುಕ್ರವಾರ ಕೋರ್ಟ್ ವಿಚಾರಣೆ ನಡೆಸಲಿದೆ. ಫಿರ್ಯಾದುದಾರರ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇವೆ. ಆಯುಕ್ತರು ವಿವಾದಾತ್ಮಕ ಸ್ಥಳದಲ್ಲಿ ನಡೆಸಲಾದ ಸಮೀಕ್ಷಾ ವರದಿ ಸಲ್ಲಿಸಲಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.
ಸಮೀಕ್ಷೆಗೆ ಅವಕಾಶ ನೀಡಿದ್ದ ಜಿಲ್ಲಾ ನ್ಯಾಯಾಲಯದ ನವೆಂಬರ್ 19ರ ಆದೇಶವನ್ನು ಪ್ರಶ್ನಿಸಿ ಸಂಭಾಲ್‌ನ ಶಾಹಿ ಜಾಮಾ ಮಸೀದಿಯ ನಿರ್ವಹಣಾ ಸಮಿತಿ ಸಲ್ಲಿಸಿದ ಅರ್ಜಿಯನ್ನು ಕೂಡಾ ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now