ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಕನಕಲಕ್ಷ್ಮೀ ಅವರನ್ನು ಹೊರಗಿಟ್ಟು ಸಿಐಡಿ ತನಿಖೆ ಮುಂದುವರಿಸಲಾಗಿದೆ.
ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ಹಾಗೂ 25 ಲಕ್ಷ ರೂ.ಲಂಚ ಬೇಡಿಕೆಯಿಟ್ಟಿದ್ದ ಆರೋಪದ ಉರುಳು ಡಿವೈಎಸ್‌ಪಿ ಕನಕಲಕ್ಷ್ಮೀ ಅವರಿಗೆ ಸುತ್ತಿಕೊಂಡಿತ್ತು. ಈ ಬನಶಂಕರಿ ಠಾಣೆಯಲ್ಲಿ ಕನಕಲಕ್ಷ್ಮೀ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಬಂಧ ಸಿಸಿಬಿ ತನಿಖೆ ನಡೆಸುತ್ತಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದಾಪುರ ಠಾಣೆಯಲ್ಲಿ ಭೋವಿ ನಿಗಮದ ಅಕ್ರಮ ಪ್ರಕರಣದ ತನಿಖಾಧಿಕಾರಿ ಆಗಿದ್ದ ಕನಕಲಕ್ಷ್ಮೀ ಅವರನ್ನು ಬದಲಾಯಿಸಲಾಗಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ನಕಲಿ ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಿರುವ ಸುಮಾರು 90 ಕೋಟಿ ರೂ. ಮೊತ್ತದ ಅಕ್ರಮಕ್ಕೆ ಸಂಬಂಧಿಸಿದಂತೆ 2023ರಿಂದ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ.
ಪ್ರತಿ ಪ್ರಕರಣಕ್ಕೆ ಪ್ರತ್ಯೇಕ ತನಿಖಾಧಿಕಾರಿ ನಿಯೋಜಿಸಲಾಗಿದೆ. ಪ್ರಕರಣಗಳು ತನಿಖಾ ಹಂತದಲ್ಲಿದ್ದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ಮೂಲಗಳು ಹೇಳಿವೆ. ಮತ್ತೊಬ್ಬ ಡಿವೈಎಸ್‌ಪಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.
25 ಲಕ್ಷ ರೂ.ಗಳಿಗೆ ಲಂಚ ಬೇಡಿಕೆ ಹಾಗೂ ವಿವಸ್ತ್ರಗೊಳಿಸಿ ಜೀವಾ ಅವರನ್ನು ವಿಚಾರಣೆ ನಡೆಸಿದ ಆರೋಪ ಸಂಬಂಧ ತನಿಖಾಧಿಕಾರಿ ಕನಕಲಕ್ಷ್ಮೀ ವಿರುದ್ಧ ಆಂತರಿಕ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಸಿಐಡಿ ಉನ್ನತ ಮೂಲಗಳು ತಿಳಿಸಿವೆ.
ಭೋವಿ ಅಭಿವೃದ್ಧಿ ನಿಗಮದಿಂದ 46 ಮಹಿಳೆಯರಿಗೆ 2021ರಿಂದ 2023ರ ನಡುವಣ ಅವಧಿಯಲ್ಲಿ ತಲಾ ಐದು ಲಕ್ಷ ರೂ. ಸಾಲ ಮಂಜೂರಾಗಿತ್ತು. ಆದರೆ, ಫಲಾನುಭವಿ ಮಹಿಳೆಯರಿಗೆ ಕೇವಲ 50 ಸಾವಿರ ರೂ.ಮಾತ್ರ ಸಿಕ್ಕಿದ್ದು, ಉಳಿದ ಮೊತ್ತವನ್ನು ಅನಿಕಾ ಎಂಟರ್‌ಪ್ರೈಸಸ್, ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್ ಸೇರಿದಂತೆ ಹಲವರ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿತ್ತು. ಸುಮಾರು 23 ಕೋಟಿ ರೂ.ವಂಚನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯರು ದೂರು ನೀಡಿದ್ದರು.
ಫಲಾನುಭವಿ ಮಹಿಳೆಯರಿಗೆ ಮಂಜೂರಾದ ಐದು ಲಕ್ಷ ರೂ. ಮೊತ್ತ ಮೊದಲಿಗೆ ಅನಿಕಾ ಎಂಟರ್‌ಪ್ರೈಸಸ್ ಹಾಗೂ ಇತರೆ ಕಂಪನಿಗಳ ಖಾತೆಗೆ ಬ್ಯಾಂಕ್‌ನಿಂದ ವರ್ಗಾವಣೆ ಆಗುತ್ತಿತ್ತು. ಈ ಮೊತ್ತದಲ್ಲಿ 50 ಸಾವಿರ ರೂ. ಫಲಾನುಭವಿ ಮಹಿಳೆಗೆ ವರ್ಗಾಯಿಸಲಾಗಿತ್ತು. ಬಳಿಕ ಪುನಃ ಕಮಿಷನ್ ನೆಪದಲ್ಲಿ 25 ಸಾವಿರ ರೂ.ವಾಪಸ್ ಪಡೆಯಲಾಗಿತ್ತು ಎಂದು ಮೂಲಗಳು ಹೇಳಿವೆ.
ಈ ಪ್ರಕರಣದ ತನಿಖೆಯಲ್ಲಿವಕೀಲೆ, ಉದ್ಯಮಿ ಜೀವಾ ಅವರು ವ್ಯವಸ್ಥಾಪಕ ನಿರ್ದೇಶಕಿ ಎನ್ನಲಾದ ಅನಿಕಾ ಎಂಟರ್‌ಪ್ರೈಸಸ್ ಕಂಪನಿ ಖಾತೆಗೆ ಸುಮಾರು 7.16 ಕೋಟಿ ರೂ. ವರ್ಗಾವಣೆಯಾಗಿತ್ತು. ಅವರ ಸಹೋದರಿ ಸಂಗೀತಾ ಮಾಲೀಕರು ಎನ್ನಲಾದ ಹರ್ನಿತಾ ಎಂಟರ್‌ಪ್ರೈಸಸ್ ಖಾತೆಗೆ 3.8 ಕೋಟಿ ರೂ. ಸಂದಾಯವಾಗಿದ್ದ ವಿಚಾರ ಬಯಲಾಗಿತ್ತು ಎಂದು ಸಿಐಡಿ ಮೂಲಗಳು ಹೇಳಿವೆ.
ಅನಿಕಾ ಎಂಟರ್‌ಪ್ರೈಸಸ್ ಕಂಪನಿಗೆ ಸ್ವಂತ ಕಚೇರಿಯೇ ಇರಲಿಲ್ಲ. ಪೀಣ್ಯ ಸಮೀಪದ ದನದ ಕೊಟ್ಟಿಗೆ ವಿಳಾಸ ನೀಡಿ ಬ್ಯಾಂಕ್‌ನಿಂದ ಹಣ ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಚುರುಕುಗೊಳಿಸಿದೆ.
ಡಿವೈಎಸ್‌ಪಿ ಕನಕಲಕ್ಷ್ಮೀ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ಸಂಗ್ರಹಿಸುತ್ತಿದೆ. ಜತೆಗೆ, ದೂರುದಾರರಿಂದ ಮತ್ತಷ್ಟು ಮಾಹಿತಿ ಪಡೆಯುತ್ತಿದೆ. ಆರೋಪಿ ಕನಕಲಕ್ಷ್ಮೀ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ಹರ್ನಿಕಾ ಹಾಗೂ ನ್ಯೂ ಡ್ರೀಮ್ಸ್ ಕಂಪನಿ ಕಚೇರಿಗಳ ವಿಳಾಸವನ್ನು ನಿಗಮದ ಮಾಜಿ ಎಂಡಿ ಬಿ.ಕೆ. ನಾಗರಾಜಪ್ಪ ಅವರ ಬಾಡಿಗೆ ಮನೆಗಳ ವಿಳಾಸ ನೀಡಲಾಗಿತ್ತು. ಈ ಮನೆಗಳಲ್ಲಿ ಜೀವಾ, ಸಂಗೀತಾ ಬಾಡಿಗೆಗೆ ವಾಸವಿದ್ದರು. ನಾಗರಾಜಪ್ಪನ ಸೂತ್ರದಂತೆ ಇಡೀ ಅಕ್ರಮದ ಹಣ ವರ್ಗಾವಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.