ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯದೈವ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಡಿಸೆಂಬರ್ 1ರಂದು (ಭಾನುವಾರ) ಲಕ್ಷ ದೀಪೋತ್ಸವ ಇರುವ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುವ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಜಿಲ್ಲೆಯೊಳಗೆ, ಪ್ರಮುಖ ಸ್ಥಳ ಹಾಗೂ ಹೊರ ಜಿಲ್ಲೆಗಳಿಗೆ ಬಸ್ ವ್ಯವಸ್ಥೆ ಇರಲಿದೆ. ವಿಶೇಷ ಬಸ್ಗಳು ಹೊಸೂರು ಬಸ್ ನಿಲ್ದಾಣ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಸಿದ್ಧಾರೂಢ ಸ್ವಾಮಿ ಮಠದ ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಇರಲಿದೆ.
ಡಿಸೆಂಬರ್ 1ರಂದು ಸಂಜೆ 6 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ದೀಪೋತ್ಸವದಲ್ಲಿ ಭಾಗವಹಿಸಲು ಜಿಲ್ಲೆಯ ಪ್ರಮುಖ ಸ್ಥಳಗಳು, ನೆರೆಯ ಜಿಲ್ಲೆಗಳು ಮತ್ತು ದೂರದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆಯಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.
ಬೆಳಗಾವಿ, ಶಿರಸಿ, ಕಾರವಾರ, ಮಂಗಳೂರು, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಶಿವಮೊಗ್ಗ ಕಡೆಗೆ ಹೋಗುವ ಬಸ್ಗಳು ಗೋಕುಲ ರಸ್ತೆ ನಿಲ್ದಾಣದಿಂದ ಹೊರಡಲಿವೆ. ಹೆಚ್ಚಿನ ಮಾಹಿತಿಗಾಗಿ 7760991682 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ವಿಶೇಷ ಬಸ್ಗಳ ಸದುಪಯೋಗ ಮಾಡಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ನವಲಗುಂದ, ನರಗುಂದ, ಬಾಗಲಕೋಟೆ, ವಿಜಯಪುರ, ಗದಗ, ರಾಯಚೂರು, ಕೊಪ್ಪಳ, ಹೊಸಪೇಟೆ ಕಡೆಗೆ ಹೋಗುವ ಬಸ್ಗಳು ಹೊಸೂರು ನಿಲ್ದಾಣದಿಂದ ಹೊರಡಲಿವೆ. ಹೆಚ್ಚಿನ ಮಾಹಿತಿಗಾಗಿ 7760991662/7760991685 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.