ನವದೆಹಲಿ: ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರ ಮೇಲೆ ಕರುಣೆ ಇಲ್ಲದೇ ಖಡಕ್ ಕಾನೂನು ಕ್ರಮ ಜರುಗಿಸುವುದಾಗಿ ಇರಾನ್ ನ್ಯಾಯಾಂಗದ ಮುಖ್ಯಸ್ಥ ಘೋಲಾಮ್‌ಹೊಸೇನ್ ಮೊಹ್ಸೇನಿ-ಎಜೆಯಿ ಎಚ್ಚರಿಕೆ ನೀಡಿದ್ದಾರೆ.
48 ಗಂಟೆಗಳಲ್ಲಿ ಮಹಿಳೆಯರು ಹಿಜಾಬ್ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಇರಾನ್ ಸಂಸದರು ನ್ಯಾಯಾಂಗಕ್ಕೆ ಒತ್ತಾಯಿಸಿದ್ದಾರೆ. ಸಂಸದರೊಬ್ಬರು ಹಿಜಾಬ್ ಅನ್ನು “ದೈವಿಕ ತೀರ್ಪು” ಎಂದು ಕರೆದದ್ದನ್ನು ಜಾರಿಗೊಳಿಸಲು ಶಾಸಕಾಂಗ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರು ಕಡ್ಡಾಯ ಹಿಜಾಬ್ ಧರಿಸುವ ಕಾನೂನು ಜಾರಿಗೊಳಿಸುವ ಸಂಬಂಧ ಇರಾನ್‌ನ ಅಧಿಕಾರಿಗಳು ತಮ್ಮ ನಿರ್ಣಯವನ್ನು ಸ್ಪಷ್ಟಪಡಿಸುತ್ತಿದ್ದಾರೆ.
ಇರಾನ್ ಮಾನವ ಹಕ್ಕುಗಳ ಆಯೋಗದ ವರದಿಯಂತೆ “2023ರ ಜನವರಿ 27ರ ವರೆಗೆ 64 ಮಕ್ಕಳು, ಮಹಿಳೆಯರು ಸೇರಿದಂತೆ 488 ಜನರು ಪ್ರತಿಭಟನೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ವಿದ್ಯಾರ್ಥಿನಿ ಮಹ್ಸಾ ಅಮಿನಿ ಸಾವಿನ ಬಳಿಕ ಇರಾನ್ನಲ್ಲಿ ಆರಂಭವಾದ ವಸ್ತ್ರ ಸಂಹಿತೆ ವಿರುದ್ಧದ ಹೋರಾಟ ಮುಂದುವರೆದಿದೆ.
ಹಿಜಾಬ್ ಇಸ್ಲಾಮಿಕ್ ಕಾನೂನಿನ ಅತ್ಯಗತ್ಯ ಅಂಶವಾಗಿ ಉಳಿದಿದೆ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಪ್ರಮುಖ ತತ್ವಗಳಲ್ಲಿ ಒಂದಾಗಿ ಉಳಿಯುತ್ತದೆ.
ಇರಾನ್‌ನ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕುರ್ದಿಶ್ ಜನಾಂಗೀಯ ಗುಂಪಿನ ಮಹ್ಸಾ ಅಮಿನಿ(22) ಎಂಬ ವಿದ್ಯಾರ್ಥಿನಿಯನ್ನು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಟೆಹರಾನ್ ಪೊಲೀಸರು ಬಂಧಿಸಿದ್ದರು.
ಪ್ರತಿಭಟನೆಗೆ ಸ್ವಲ್ಪ ಬೆದರಿದ ಇರಾನ್ ಸರ್ಕಾರ ಪ್ರತಿಭಟನೆ ಭುಗಿಲೆದ್ದ 3 ತಿಂಗಳ ಬಳಿಕ ನೈತಿಕ ಪೊಲೀಸ್ ವಿಭಾಗವನ್ನು ರದ್ದುಗೊಳಿಸಿತ್ತು. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ಥಾಪನೆ ನಂತರ ದೇಶದಲ್ಲಿ ಹಿಜಾಬ್ನ್ನು ಕಡ್ಡಾಯಗೊಳಿಸಲಾಗಿತ್ತು.
2021ರಲ್ಲಿ ಇಬ್ರಾಹಿಂ ರೈಸಿ ಇರಾನ್ ಅಧ್ಯಕ್ಷರಾಗುತ್ತಿದ್ದಂತೆ ಹಿಜಾಬ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದರು. ಅಧ್ಯಕ್ಷ ಹಸನ್ ರೌಹಾನಿ ಅವರ ಅಧಿಕಾರಾವಧಿಯಲ್ಲಿ ಮಹಿಳೆಯರು ಸಡಿಲ ಮತ್ತು ಬಣ್ಣ ಬಣ್ಣದ ಶಿರವಸ್ತ್ರ ಹಾಗೂ ಜೀನ್ಸ್ ಧರಿಸಲು ಅವಕಾಶ ನೀಡಲಾಗಿತ್ತು. ಮಹ್ಸಾ ಅಮಿನಿ ಸಾವಿನ ಬಳಿಕ ಆರಂಭವಾದ ಪ್ರತಿಭಟನೆ ಉಲ್ಬಣಗೊಂಡಿದೆ.