ಬೆಂಗಳೂರು: ಅನುಮತಿ ಇಲ್ಲದೇ ಎಲ್‌ಪಿಜಿ ಗ್ರಾಹಕರನ್ನು ವರ್ಗಾಯಿಸದಂತೆ ತೈಲ ಕಂಪನಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು.
ಸಮಾಜದಲ್ಲಿ ಬೆದರಿಕೆ ಹಾಕುವುದಕ್ಕಾಗಿ ಹುಟ್ಟಿಕೊಂಡಿರುವ ಸಂಘಗಳಿಗೆ ಕಡಿವಾಣ ಹಾಕಬೇಕಿದೆ. ಆಗಿದ್ದು ಆಯಿತು ಇನ್ನು ಮುಂದೆ ಇಂತಹ ಸಂಘಗಳಿಗೆ ನಿಯಂತ್ರಣ ಹಾಕಬೇಕಾಗಿದೆ ಹೈಕೋರ್ಟ್ ಕಟುವಾಗಿ ಹೇಳಿದೆ.
ಎಲ್‌ಪಿಜಿ ಗ್ರಾಹಕರ ಒಪ್ಪಿಗೆ ಇಲ್ಲದೆ ತೈಲ ಕಂಪನಿಗಳ ಡೀಲರ್‌ಗಳು ಗ್ರಾಹಕರನ್ನು ವರ್ಗಾಯಿಸಬಾರದು ಅಥವಾ ಸ್ಥಳಾಂತರಿಸಬಾರದು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳಿಗೆ ನಿರ್ದೇಶನ ನೀಡಬೇಕು ಎಂದು ಉಡುಪಿ ಜಿಲ್ಲೆಯ ಬಡಗಬೆಟ್ಟು ವಿಳಾಸ ಹೊಂದಿರುವ ಕರ್ನಾಟಕ ರಾಜ್ಯ ಎಲ್‌ಪಿಜಿ ಗ್ರಾಹಕರ ಸಂಘ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿಯನ್ನು ಗಮನಿಸಿದ ನ್ಯಾಯಪೀಠ, ಇದೇನಿದು, ಇದ್ಯಾವ ಸಂಘ, ಗ್ರಾಹಕರ ಅನುಮತಿ ಇಲ್ಲದೆ ಸಂಘ ಅಧಿಕಾರ ಚಲಾಯಿಸುತ್ತಿದೆ. ಇಂತಹ ಸಂಘಗಳ ಹೆಸರಲ್ಲಿ ಬ್ಲಾಕ್‌ಮೇಲ್ ಮಾಡಬೇಡಿ. ಅಷ್ಟಕ್ಕೂ ಸಹಕಾರ ಸಂಘಗಳ ನೋಂದಣಿ ಕಾಯ್ದೆಯಡಿ ಇಂತಹ ಸಂಘ ಸ್ಥಾಪಿಸಲು ಅವಕಾಶ ಇದೆಯೇ? ಇಂತಹದ್ದೊಂದು ಸಂಘ ಅಸ್ತಿತ್ವಕ್ಕೆ ಬರಲು ಅವಕಾಶ ಸಿಕ್ಕಿದ್ದಾದರೂ ಹೇಗೆ? ಅವಕಾಶ ಕೊಟ್ಟವರ‍್ಯಾರು? ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿತು.
ಅಲ್ಲದೆ, ಸಹಕಾರ ಸಂಘಗಳ ನೋಂದಣಿಗೆ ಸಂಬಂಧಿಸಿದ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲು ಅರ್ಜಿದಾರರಿಗೆ ಸೂಚಿಸಿತು. ಜೊತೆಗೆ, ಈ ಸಂಬಂಧ ವರದಿ ಸಲ್ಲಿಸಲು ಸರ್ಕಾರದ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.