ಬೆಳಗಾವಿ: ನಗರದಲ್ಲಿ ಮಹಾಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದೇಷ್ಟೋ ಕುಟುಂಬಗಳ ಬದುಕು ಬೀದಿಗೆ ಬಂದಿದೆ. ಮನೆಯೊಳಗೆ ನೀರು ನುಗ್ಗಿದ್ದರಿಂದ ರಾತ್ರೋ ರಾತ್ರಿ 20ಕ್ಕೂ ಅಧಿಕ ಮನೆಗಳಲ್ಲಿನ ಜನ ಮನೆ ತೊರೆದಿದ್ದಾರೆ.
ಹೌದು, ಬೆಳಗಾವಿಯ ಖಾಸಬಾಗದ ರಾಘವೇಂದ್ರ ಕಾಲೋನಿಯಲ್ಲಿ 20ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೀರನ್ನು ಹೊರ ಹಾಕಲು ಆಗದೇ ರಾತ್ರೋ ರಾತ್ರಿ ಮನೆಗಳಿಗೆ ಕೀಲಿ ಹಾಕಿ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮತ್ತೊಂದಿಷ್ಟು ಜನರು ತಮ್ಮ ಮನೆಯಲ್ಲೆ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ. ಮನೆ ಹೊರಗೂ, ಒಳಗೂ ಮೊಣಕಾಲುದ್ದ ನೀರು ನಿಂತಿದ್ದರಿಂದ ಇಲ್ಲಿನ ನಿವಾಸಿಗಳು ಬದುಕು ಮೂರಾಬಟ್ಟೆಯಾಗಿದೆ.
ಪ್ರತಿ ವರ್ಷ ಮಳೆ ಬಂದಾಗ ಈ ರೀತಿ ಮನೆಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಇಲ್ಲ. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಇಲ್ಲಿನ ಜನರು ಪಡಬಾರದ ಪಡಿಪಾಟಲು ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಸೇರಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ.
ಈ ಕುರಿತು ಸ್ಥಳೀಯ ನಿವಾಸಿ ವಿಶ್ವಾಸ ಕುಂಬೋಜಕರ್ ಮಾತನಾಡಿ, ಪ್ರತಿ ವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ತಪ್ಪಿದ್ದಲ್ಲ. ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿ ಇಲ್ಲಿ ಭೇಟಿ ಕೊಟ್ಟಿಲ್ಲ. ಮನೆಯಲ್ಲಿನ ಸಾಮಾನುಗಳು ಈಗ ನೀರಲ್ಲೆ ಇವೆ. ಒಂದಿಷ್ಟು ವಸ್ತುಗಳನ್ನು ಮೇಲಿನ ಮಹಡಿಯಲ್ಲಿ ಇಟ್ಟಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು.
ಸ್ಥಳೀಯ ಯುವಕ ತೇಜಸ್ ಕುಮಾರ್ ಕಾಂಬಳೆ ಮಾತನಾಡಿ, ಸ್ಥಳೀಯ ಶಾಸಕರು, ಮಹಾನಗರ ಪಾಲಿಕೆ, ನಗರಸೇವಕರಿಗೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಅವರು ಸ್ಪಂದಿಸಿಲ್ಲ. ಏಕಾಏಕಿ ಮನೆಯೊಳಗೆ ನೀರು ಬಂದರೆ ಸಣ್ಣ ಮಕ್ಕಳು, ವೃದ್ಧರನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು. ಚರಂಡಿ ನೀರು ವಾಪಸ್ ಮನೆಗೆ ಬರುತ್ತಿದೆ. ಒಟ್ಟಾರೆ ಅವೈಜ್ಞಾನಿಕವಾಗಿ ಲೇಔಟ್ ನಿರ್ಮಿಸಿದ್ದರಿಂದ ಇಷ್ಟೇಲ್ಲಾ ಸಮಸ್ಯೆ ಆಗುತ್ತಿದೆ. ನಮ್ಮ ಕಡೆಯಿಂದ ಲಕ್ಷ ಲಕ್ಷ ಆಸ್ತಿ ತೆರಿಗೆ ಸಂಗ್ರಹಿಸಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಮನೆಗೆ ನೀರು ನುಗ್ಗಿದ್ದು ಕೇಳಿ ಹೃದಯಾಘಾತದಿಂದ ವ್ಯಕ್ತಿ ಸಾವು: ಮತ್ತೊಂದೆಡೆ, ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಹೃದಯಾಘಾತದಿಂದ ಮನೆ ಯಜಮಾನ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗೋಕಾಕ್ ನಗರದಲ್ಲಿ ನಡೆದಿದೆ. ಗೋಕಾಕ್ ಪಟ್ಟಣದ ಉಪ್ಪಾರ ಗಲ್ಲಿ ನಿವಾಸಿ ದಶರಥ ಬಂಡಿ(80) ಮೃತ ದುರ್ದೈವಿ. ನಿನ್ನೆ(ಶುಕ್ರವಾರ) ಸಂಜೆ ಮನೆಗೆ ನೀರು ಬರುವ ವಿಚಾರ ತಿಳಿದು ಹೃದಯಾಘಾತದಿಂದ ಮೃತರಾಗಿದ್ದಾರೆ.
ನಿನ್ನೆ ರಾತ್ರಿ ದಶರಥ ಅವರ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ವಾಪಸ್ ಆಗುಷ್ಟರಲ್ಲಿ ಮನೆ ಮುಳುಗಿದೆ. ರಾತ್ರೋರಾತ್ರಿ ಉಟ್ಟಬಟ್ಟೆಯಲ್ಲೇ ಮನೆ ಬಿಟ್ಟು ಕುಟುಂಬಸ್ಥರು ಹೊರಗೆ ಬಂದಿದ್ದಾರೆ. ಮಕ್ಕಳು, ನಾಯಿ ಮರಿಗಳ ಜೊತೆಗೆ ಕಾಳಜಿ ಕೇಂದ್ರಕ್ಕೆ ದಶರಥ ಬಂಡಿ ಕುಟುಂಬ ಸ್ಥಳಾಂತರವಾಗಿದೆ.