ಬೆಂಗಳೂರು: ಕೆಲವು ಗ್ಯಾರಂಟಿ ಯೋಜನೆಗಳನ್ನು ಕೈಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಹಣ ಮಂಜೂರು ಮಾಡುವಂತೆ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ತಡವಾಗುತ್ತಿರಬಹುದು ಆದರೆ, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳೂ ನಿಂತಿಲ್ಲ. ಗ್ಯಾರಂಟಿ ಯೋಜನೆಗಳುಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ಬುಧವಾರ ಹೇಳಿದರು.
ಕೆಲವು ಗ್ಯಾರಂಟಿ ಯೋಜನೆಗಳನ್ನು ಕೈಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಹಣ ಮಂಜೂರು ಮಾಡುವಂತೆ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಶಾಸಕರ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಪಕ್ಷ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.
ಯಾರಿಗೂ ಗೊತ್ತಿಲ್ಲದೇ ಕದ್ದು ಮುಚ್ಚಿ ತೆಗೆದುಕೊಂಡಿರುವ ತೀರ್ಮಾನವೇನಲ್ಲ. ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಜನಸಮುದಾಯ ನಮ್ಮನ್ನು ನಂಬಿ ಮತ ಚಲಾಯಿಸಿರಬಹುದು.
ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುವುದು ನಮ್ಮ ಕರ್ತವ್ಯ. ನಮ್ಮ ನಮ್ಮ ಅಭಿಪ್ರಾಯಗಳು ಬೇರೆ ಇರಬಹುದು. ನಾವು ಕೊಟ್ಟಿರುವ ಮಾತನ್ನು ಉಳಿಕೊಳ್ಳಬೇಕು. ಯಾವುದೇ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದರಲ್ಲಿ ತಪ್ಪಿಲ್ಲ,
ಯೋಜನೆಗಳ ಅನುಷ್ಠಾನದಲ್ಲಿ ತಡವಾಗುತ್ತಿರಬಹುದು. ಆದರೆ, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಂತಿಲ್ಲ. ಹಿಂದಿನ ಸರ್ಕಾರವು ಲಕ್ಷಾಂತರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿತ್ತು. ಅದನ್ನೆಲ್ಲ ನಾವು ಭರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ರೂ.56 ಸಾವಿರ ಕೋಟಿ ಹೆಚ್ಚುವರಿ ಖರ್ಚಾಗಿದೆ.
ಬಜೆಟ್ ಅಮೌಂಟ್ ರೂ.3.27 ಲಕ್ಷ ಕೋಟಿ ಯಿಂದ, ರೂ.3.75 ಲಕ್ಷ ಕೋಟಿಗೆ ಹೆಚ್ಚಾಗಿದೆ. ಮುಂದಿನ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ ಕೊಟ್ಟರೂ ಹೆಚ್ಚಿನ ಹಣ ದೊರಕುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ನಮಗೆ ಬರಬೇಕಾದ ಹಣವನ್ನು ಸರಿಯಾಗಿ ಹಣ ನೀಡುತ್ತಿಲ್ಲ. ಒತ್ತಾಯ ಮಾಡಿ ಹಣ ತಂದು, ಸಂಪನ್ಮೂಲ ಕ್ರೂಢೀಕರಣವನ್ನು ಜಾಸ್ತಿ ಮಾಡಲಾಗಿದೆ.
ಹಣಕಾಸಿನ ಸ್ಥಿತಿಗತಿಯನ್ನು ಬ್ಯಾಲೆನ್ಸ್ ಮಾಡಲು ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ಎರಡು ಬಾರಿ ನಮಗೆಲ್ಲ ಹೇಳಿದ್ದಾರೆ. ಯಾವುದು ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭೋವಿ ಮಹಾನಗರ ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಮಾತನಾಡಿ, ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ, ತನಿಖಾ ವರದಿಯನ್ನು ನಾವು ತಿಳಿದುಕೊಳ್ಳಬೇಕಾಗಿರುವುದರಿಂದ ಹೆಚ್ಚು ಹೇಳಲಾರ ಎಂದರು.
ಸಂಪುಟ ಪುನಾರಚನೆ ವಿಚಾರ ಕುರಿತು ಮಾತನಾಡಿ, ನಿರ್ಧಾರ ಸಿಎಂ ಅವರದ್ದು, ಸಚಿವ ಸಂಪುಟ ಪುನರ್ ರಚನೆ ವಿಚಾರ ಸಂಪೂರ್ಣವಾಗಿ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರೊಂದಿಗೆ ಸಮಾಲೋಚನೆ ಮಾಡಿಕೊಂಡು ಮಾಡುವ ಪದ್ಧತಿ ಇದೆ.
ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಿ, ಅವರಿಬ್ಬರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.