ಧಾರವಾಡ: ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಮಂದಿ ಆರೋಪಿಗಳಿಗೆ ಧಾರವಾಡ ಹೈಕೋರ್ಟ್ ಪೀಠ ಜಾಮೀನು ಮುಂಜೂರು ಮಾಡಿದೆ.
ಪ್ರಕರಣದಲ್ಲಿ ಎ1 ಆರೋಪಿ ಮಂಜುನಾಥ ಹೊರತುಪಡಿಸಿ ಉಳಿದವರಿಗೆ ಜಾಮೀನು ಮುಂಜೂರು ಮಾಡಲಾಗಿದೆ. ಪ್ರತಿಯೊಬ್ಬರಿಂದಲೂ 50 ಸಾವಿರ ರೂ. ಬಾಂಡ್ ಹಾಗೂ ಒಂದು ಲಕ್ಷ ರೂ. ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದೆ. ಮರಕುಂಬಿ ಗ್ರಾಮದ ಆರೋಪಿಗಳಿಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ತೀರ್ಪು ಪ್ರಶ್ನಿಸಿ ಆರೋಪಿತರು ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದಲ್ಲಿ ಒಟ್ಟು 101 ಜನರಿಗೆ ಶಿಕ್ಷೆ ಪ್ರಕಟವಾಗಿತ್ತು. ಈ ಪೈಕಿ ಒಬ್ಬ ಆರೋಪಿ ಸಾವನ್ನಪ್ಪಿದ್ದಾರೆ. ಪ್ರಕರಣದ ಎ1 ಆರೋಪಿ ಮಂಜುನಾಥ ಜಾಮೀನಿಗೆ ಅರ್ಜಿ ಸಲ್ಲಿಸದ ಕಾರಣ ಅವರಿಗೆ ಜಾಮೀನು ಮಂಜೂರಾಗಿಲ್ಲ. ಮಿಕ್ಕಂತೆ 98 ಜನರಿಗೆ ಜಾಮೀನು ಮಂಜೂರಾಗಿದೆ. ಜಾಮೀನು ಪಡೆದುಕೊಂಡ ಆರೋಪಿತರು ಪೂರ್ವ ಅನುಮತಿ ಇಲ್ಲದೇ ಹೊರಜಿಲ್ಲೆಗೆ ತೆರಳುವಂತಿಲ್ಲ, ಅಧಿಕಾರಿಗಳು ನಡೆಸುವ ವಿಚಾರಣೆಗೆ ಅಗತ್ಯವಾಗಿ ಹಾಜರಾಗತಕ್ಕದ್ದು, ತನಿಖೆಗೆ ಸಹಕರಿಸಬೇಕು. ಪ್ರಕರಣದ ಸಂಬಂಧ ಸಾಕ್ಷ್ಯ ನಾಶ ಮಾಡುವಂತಿಲ್ಲ ಎಂಬ ವಿವಿಧ ಷರತ್ತು ವಿಧಿಸಲಾಗಿದೆ.
2014ರ ಆಗಸ್ಟ್ 28ರಂದು ಗಂಗಾವತಿಯಲ್ಲಿ ಮರಕುಂಬಿ ಗ್ರಾಮದ ಮಂಜುನಾಥ್ ಮತ್ತು ಅವರ ಗೆಳೆಯರು ಸಿನಿಮಾ ನೋಡಲು ಹೋದಾಗ ಟಿಕೆಟ್ ವಿಚಾರವಾಗಿ ಗಲಾಟೆ ನಡೆದಿತ್ತು. ಈ ವೇಳೆ ಅವರ ಮೇಲೆ ಅಪರಿಚಿತರಿಂದ ಹಲ್ಲೆ ನಡೆದಿತ್ತು. ಈ ಹಲ್ಲೆಯನ್ನು ಗ್ರಾಮದ ದಲಿತರೇ ಮಾಡಿಸಿದ್ದು ಅಂತಾ ಭಾವಿಸಿ ತಂಡದ ಜೊತೆ ಮಂಜುನಾಥ್ ಬಂದು ಹಲ್ಲೆ ಮಾಡಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದರು. ಈ ವೇಳೆ ಗುಡಿಸಲುಗಳಿಗೆ ಬೆಂಕಿಯನ್ನೂ ಹಚ್ಚಿದ್ದರು’ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗ್ರಾಮದ ಭೀಮೇಶ ದೂರು ದಾಖಲಿಸಿದ್ದರು. ಈ ಸಂಬಂಧ ಅಂದು 101 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚಂದ್ರಶೇಖರ್ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ಒಂದೇ ಪ್ರಕರಣದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಮಾಡಿದ್ದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.
ಜಾಮೀನು ಮುಂಜೂರಾದ ಬಗ್ಗೆ ಹೈಕೋರ್ಟ್ ವಕೀಲರಾದ ಆನಂದ ಕೊಳ್ಳಿ ಪ್ರತಿಕ್ರಿಯಿಸಿ, ”ಕೊಪ್ಪಳ ಸೆಷನ್ಸ್ ನ್ಯಾಯಾಲಯ 99 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಜಾತಿ ನಿಂದನೆ ಕೇಸ್ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟವಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದೆವು. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ಹೈಕೋರ್ಟ್, ಜಾಮೀನಿನಲ್ಲಿ ಇದ್ದಾಗ ಹೇಗೆ ವರ್ತಿಸಿದ್ದರು ಎಂಬುದನ್ನು ಪರಿಗಣಿಸಿದೆ. ಜಾಮೀನು ಷರತ್ತು ಉಲ್ಲಂಘಿಸಿದ್ದಾರಾ? ಎಂಬುದನ್ನು ಪರಿಶೀಲಿಸಿದೆ. ಎಲ್ಲ ವಿಷಯಗಳನ್ನೂ ಗಣನೆಗೆ ತೆಗೆದುಕೊಂಡು ಜಾಮೀನು ಮಂಜೂರು ಮಾಡಲಾಗಿದೆ. ಎ1 ಆರೋಪಿ ಹೊರತುಪಡಿಸಿ ಉಳಿದೆಲ್ಲರಿಗೆ ಜಾಮೀನು ಸಿಕ್ಕಿದೆ. ಎ1 ಆರೋಪಿಗೂ ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತೇವೆ” ಎಂದು ತಿಳಿಸಿದರು.
”ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ಸಮಗ್ರ ವಿಚಾರಣೆ ಬಳಿಕ ಜಾಮೀನು ಸಿಕ್ಕಿದೆ. ಪ್ರಕರಣದಲ್ಲಿ ಅನೇಕ ಲೋಪಗಳು ಕಂಡುಬಂದಿವೆ. ಕೇಸ್ ಗುರುತು ಪತ್ತೆ ಪರೇಡ್ ಆಗಿರಲಿಲ್ಲ, ಅದೇ ಲೋಪ ಪ್ರಮುಖವಾಗಿ ಕಂಡು ಬಂದಿತ್ತು. ಚಿತ್ರಮಂದಿರದಲ್ಲಿ ಮಧ್ಯಾಹ್ನ 12 ಗಂಟೆಗೆ ಗಲಾಟೆ ಆಗಿತ್ತು. ಬಳಿಕ ಸಂಜೆ 4 ಗಂಟೆಗೆ ಅವರ ಏರಿಯಾಗೆ ಬಂದು ದಾಳಿ ಮಾಡಿದ್ದರು ಎನ್ನಲಾಗಿದೆ. ಆದರೆ ಎಫ್‌ಐಆರ್ ಆಗಿದ್ದು ಮಧ್ಯರಾತ್ರಿ 12ಕ್ಕೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರೂ ಇದ್ದರು ಎಂದೂ ಹೇಳಲಾಗಿದೆ. ಹಾಗಾದರೆ ಯಾಕೆ ಸ್ವಯಂಪ್ರೇರಿತ ದೂರು ದಾಖಲಾಗಿರಲಿಲ್ಲ. ಸ್ವಯಂಪ್ರೇರಿತ ದೂರು ಯಾಕೆ ದಾಖಲಾಗಿಲ್ಲ ಎಂಬ ಪ್ರಶ್ನೆಯೂ ವಿಚಾರಣೆಯಲ್ಲಿ ಬಂತು. ಇದನ್ನೆಲ್ಲ ಪರಿಗಣಿಸಿ ಜಾಮೀನು ಮಂಜೂರಾಗಿದೆ” ಎಂದು ಮಾಹಿತಿ ನೀಡಿದರು.