ಬೆಂಗಳೂರು: ಬೆಳಗಿನ ಜಾವ ಉದ್ಯಾನ ನಗರಿಯ ಕೆಲವೆಡೆ ತಣ್ಣನೆ ಗಾಳಿ ಜೊತೆ ತುಂತುರು ಮಳೆಯಾಗಿದೆ. ನಗರದ ಕೆಲ ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ.
ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ರಾಮನಗರ, ಕೋಲಾರ, ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆ ಸೇರಿ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಜೊತೆಗೆ ಗುಡುಗು ಸಹಿತ ಸುರಿಯಲಿದೆ.
ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇಂದು ಬೆಳಗಿನ ಜಾವ ನಗರದ ಕೆಲವೆಡೆ ತುಂತುರು ಮಳೆಯಾಗಿದೆ. ಇದರ ಜೊತೆಗೆ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ನಗರವಾಸಿಗಳು ಮನೆಯಿಂದ ಹೊರಡುವ ಮುನ್ನ ಕೊಡೆ ಹಿಡಿದುಕೊಂಡು ಹೋದರೆ ಉತ್ತಮ.
ಇನ್ನು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಹಗುರ ಮಳೆ ಉಯ್ಯಲಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರುವ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜು ಇರುವ ಸಾಧ್ಯತೆ ಹೆಚ್ಚಿದೆ.